(ಕೊಲೆಯಾದ ಶರಣ ಶೆಟ್ಟಿ ಸಂಗ್ರಹ ಚಿತ್ರ)
ಕುಂದಾಪುರ: ತಾಲೂಕಿನ ಆನಗಳ್ಳಿ ರಸ್ತೆಯ ಸೈಮನ್ ಕಂಫರ್ಟ್ ವಸತಿಗ್ರಹದ ಎದುರು ಶರಣ್‌ಕುಮಾರ ಶೆಟ್ಟಿ (22) ಎಂಬಾತನನ್ನು ಚೂರಿಯಿಂದ ತಿವಿದು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಭರತ್‌ಕುಮಾರ್(23) ಹಾಗೂ ಪ್ರದೀಪ ಮೊಗವೀರ ಯಾನೆ ಗುಂಡಾ (೨೨) ಬಿಡುಗಡೆಗೊಂಡಿದ್ದಾರೆ.
ಮೃತ ಶರಣ್ ಬಿಕಾಂ ವಿದ್ಯಾಭ್ಯಾಸ ಮುಗಿಸಿದ್ದು , ಕಾಲೇಜೊಂದರ ಪ್ರಿನ್ಸಿಪಾಲರನ್ನು ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಎದುರಿಸುತ್ತಿದ್ದ. ಈತ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಪೂರ್ವದ್ವೇಷದಿಂದ ಆರೋಪಿಗಳು 2012ರ ಮಾ.20ರಂದು ರಾತ್ರಿ 12.20ರ ಸುಮಾರಿಗೆ ಹತ್ಯೆಗೈದಿದ್ದರು ಎಂದು ಆರೋಪಿಸಲಾಗಿತ್ತು. ಮೃತ ಶರಣ್ ಕುಂದಾಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಅಂದಿನ ಪೊಲೀಸ್ ವ್ರತ್ತನಿರೀಕ್ಷಕ ಮದನ್ ಗಾಂವ್ಕರ್ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರ ಹೆಚ್ಚುವರಿ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಧೀಶ ರಾಜಶೇಖರ ವೆಂಕನಗೌಡ ಪಾಟೀಲ್ ಆರೋಪಿಗಳ ವಿರುದ್ಧ ಮಾಡಲಾದ ಆರೋಪಗಳು ಸಾಕ್ಷ್ಯಾಧಾರಗಳಿಂದ ರುಜುವಾತಾಗಿಲ್ಲವೆಂದು ಮನಗಂಡು ಬಿಡುಗಡೆಗೊಳಿಸಿದ್ದಾರೆ. ಆರೋಪಿಗಳ ಪರ ಕುಂದಾಪುರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.