ಮಂಗಳೂರು: ಡಿಸೆಂಬರ್ 12, 13, ಮತ್ತು 14ರಂದು ಮಂಗಳೂರಿನಲ್ಲಿ ನಡೆಯಲಿರುವ ವಿಶ್ವ ತುಳುವರೆ ಪರ್ಬದ ಯಶಸ್ಸಿಗೆ ಜಿಲ್ಲಾಡಳಿತ ಶ್ರಮಿಸಬೇಕು. ಶಾಲಾ ಶಿಕ್ಷಕರಿಗೆ ಒಒಡಿ ಸೌಲಭ್ಯ ಸೇರಿದಂತೆ ಶುಚಿತ್ವ, ಆರೋಗ್ಯ ಸೇವೆಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ‘ವಿಶ್ವ ತುಳುವೆರೆ ಪರ್ಬ-2014’ ಸಿದ್ಧತೆಯ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಳು ಪರ್ಬಕ್ಕೆ ಮೊದಲ ದಿನ 20ಸಾವಿರ, ಎರಡನೇ ದಿನ 50ಸಾವಿರ ಹಾಗೂ ಮೂರನೇ ದಿನ 75ಸಾವಿರ ಮಂದಿ ಆಗಮಿಸುವ ನಿರೀಕ್ಷೆಯಿದ್ದು, ಇದಕ್ಕೆ ಪೂರಕವಾಗಿ ಸಂಚಾರ ವ್ಯವಸ್ಥೆಗೆ ಪೊಲೀಸರು ಕ್ರಮ ಕೈಗೊಳ್ಳಬೇಕು, ಪಾರ್ಕಿಂಗ್ ವ್ಯವಸ್ಥೆ, ವಿಶೇಷವಾಗಿ ಮಹಾನಗರ ಪಾಲಿಕೆ ಶುಚಿತ್ವ, ಆರೋಗ್ಯ ಇಲಾಖೆಯಿಂದ ತುರ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡಬೇಕು ಎಂದು ಸಚಿವ ರಮಾನಾಥ ರೈ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಸರಕಾರದಿಂದ ಇದಕ್ಕೆ 50ಲಕ್ಷ ರೂ.ಗಳನ್ನು ನೀಡುವ ಭರವಸೆ ನೀಡಿದ್ದಾರೆ. ಮಹಾನಗರ ಪಾಲಿಕೆಯಿಂದ ಹಣದ ಸಹಾಯ ಕೋರಿದ್ದೇವೆ. ಪರ್ಬಕ್ಕೆ ಒಟ್ಟು ಎರಡೂವರೆ ಕೋಟಿ ರೂ. ವೆಚ್ಚವಾಗಲಿದೆ ಎಂದು ರೈ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜುಗಳಿಗೆ ಒಒಡಿ ಸೌಲಭ್ಯ ನೀಡುವ ವ್ಯವಸ್ಥೆ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ತಿಳಿಸಿದರು. ಈ ಮೂರು ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಅಡ್ಯಾರಿನಲ್ಲಿ ನಿಲುಗಡೆ ನೀಡಬೇಕು. ವಾರ್ತಾ ಇಲಾಖೆಯಡಿಯಲ್ಲಿರುವ 10ಹೋರ್ಡಿಂಗ್‌ಗಳನ್ನು ಡಿಸೆಂಬರ್ ಒಂದರಿಂದ ಇದಕ್ಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಇಲಾಖಾವಾರು ಕೈಗೊಳ್ಳಬೇಕಾದ ಕಾರ್ಯಗಳನ್ನು ಜಿಲ್ಲಾಧಿಕಾರಿ ಸೂಚಿಸಿ, ವಿಶ್ವ ತುಳುವರೆ ಪರ್ಬ ಸಂಘಟನಾ ಸಮಿತಿಯ ಬೇಡಿಕೆಯಂತೆ ಜಿಲ್ಲೆಯ ನಾನಾ ದೇವಸ್ಥಾನಗಳಿಂದ 100ಕ್ವಿಂಟಲ್ ಅಕ್ಕಿಯನ್ನು ಉಚಿತವಾಗಿ ಭೋಜನ ವ್ಯವಸ್ಥೆಗೆ ನೀಡಲು ವ್ಯವಸ್ಥೆ ಕಲ್ಪಿಸುವಂತೆ ಮುಜರಾಯಿ ಇಲಾಖೆಗೆ ಸೂಚಿಸಿದರು.
ಶುಚಿತ್ವಕ್ಕೆ ಪಾಲಿಕೆಯಿಂದ ವಿಶೇಷ ಗ್ಯಾಂಗ್ ನಿಯೋಜಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಆರಂಭದಲ್ಲಿ ವಿಶ್ವ ತುಳುವರೆ ಪರ್ಬದ ರೂಪುರೇಷೆಗಳನ್ನು ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತುಳಸಿ ಮದ್ದಿನೇನಿ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಚಂದ್ರಹಾಸ ರೈ, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಶಾರಾದ ವಿದ್ಯಾಸಂಸ್ಥೆಯ ಮುಖ್ಯಸ್ಥ ಎಂ.ಬಿ.ಪುರಾಣಿಕ್, ತುಳುಪರ್ಬದ ಸಂಘಟಕರಾದ ಎ. ಸಿ. ಭಂಡಾರಿ ಉಪಸ್ಥಿತರಿದ್ದರು.
ಪರ್ಬದ ವಿಶೇಷತೆ :
*ವಿಶ್ವ ತುಳುವರೆ ಪರ್ಬದ ಅಂಗವಾಗಿ ಒಟ್ಟು 18ಕಾರ್ಯಕ್ರಮಗಳು *ನ.27ರಿಂದ ಡಿ.3ರವರೆಗೆ ತಾಳ ಮದ್ದೋಳಿ ಪರ್ಬ, ಡಿ.4ರಿಂದ 11ರ ವರೆಗೆ ತುಳು ನಾಟಕ ಪರ್ಬ, ಡಿ.12ರಂದು ಸಹ್ಯಾದ್ರಿ ತುಳುವರೆ ಐಸಿರಿ, ಡಿಸೆಂಬರ್ 13 ತುಳುವರೆ ಐಸಿರಿ, ಭೂತನಾಥೇಶ್ವರ ಕ್ರೀಡಾಕೂಟ, ಡಿ.14 ನಾನಾ ಗೋಷ್ಠಿಗಳು. * ದೋಣಿ ವಿಹಾರ, ಪುಸ್ತಕ ಪ್ರದರ್ಶನ, ಮಾರಾಟ, ಸಂತೆ, ತುಳುವರೆ ಖಾದ್ಯ, ಪ್ರದರ್ಶನ ಮಳಿಗೆಗಳು. * ಫೋಟೋ ಸ್ಪರ್ಧೆ, ಆರಣ್ಯ ಇಲಾಖೆ, ಮೀನುಗಾರಿಕೆ ಇಲಾಖೆಯಿಂದ ಪ್ರದರ್ಶನ ಮಳಿಗೆಗಳು. * ಸಾಂಸ್ಕೃಕ ಕಾರ್ಯಕ್ರಮದಲ್ಲಿ ಯಕ್ಷಗಾನ, ನಾಟಕ, ತುಳು ಸಿನೇಮಾ ಪದರಂಗಿತ, ಕೊಂಕಣಿ, ಬ್ಯಾರಿ ಅಕಾಡೆಮಿಯಿಂದ ನಾನಾ ಕಾರ್ಯಕ್ರಮ. * ಹಣದ ದೇಣಿಗೆಗಾಗಿ ಪುಂಡಿ ಪಣವು ಎಂಬ 100ರೂ.ಗಳ ಟಿಕೇಟ್‌ನ್ನು ಸಿದ್ಧಪಡಿಸಲಾಗಿದೆ.