ಮಂಗಳೂರು: ಹೆಣ್ಮಕ್ಕಳು, ವಿದ್ಯಾರ್ಥಿನಿಯರ ಮೇಲೆ ಸಣ್ಣ ದೌರ್ಜನ್ಯ ನಡೆದರೂ ಅಡಗಿಸಿಟ್ಟು ಸಹಿಸಿಕೊಳ್ಳಬೇಡಿ. ಅದರ ವಿರುದ್ಧ ದನಿ ಎತ್ತಿ, ಹೋರಾಟ ನಡೆಸಿ. ನ್ಯಾಯಾಲಯ, ಕಾನೂನು, ಸರಕಾರ ನಿಮ್ಮ ಜತೆಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಬೈಲೂರ್ ಶಂಕರ್ ರಾಮ ಹೇಳಿದರು.
ನಗರದ ಸೈಂಟ್ ಆ್ಯಗ್ನೇಸ್ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಬ್ರೇಕ್‌ಥ್ರೂ ಕರ್ನಾಟಕ, ಮಂಗಳೂರು ವಿವಿ ಎನ್‌ಸ್‌ಎಸ್, ಜಿಲ್ಲಾ ಕಾನುನು ಸೇವೆಗಳ ಪ್ರಾಧಿಕಾರ, ಮಂಗಳೂರು ಬಾರ್ ಅಸೋಸಿಯೇಶನ್ ಮತ್ತು ಸೈಂಟ್ ಆ್ಯಗ್ನೇಸ್ ಕಾಲೇಜಿನ ಎನ್‌ಎಸ್‌ಎಸ್ ಘಟಕ ಆಯೋಜಿಸಿದ್ದ ಲೈಂಗಿಕ ದೌರ್ಜನ್ಯ ವಿರುದ್ಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೌರ್ಜನ್ಯ ನಡೆದರೆ ಅದನ್ನು ಹೇಳಲು ಯಾವುದೇ ಹಿಂಜರಿಕೆ ಬೇಡ. ಒಂದು ಬಾರಿಗೆ ಕಷ್ಟ ಆಗುತ್ತದೆ. ಸಮಾಜ ಅದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ದೌರ್ಜನ್ಯಕ್ಕೆ ಒಳಗಾದವವರಲ್ಲಿ ಏನೂ ತಪ್ಪಿರುವುದಿಲ್ಲ. ಸಮಾಜಕ್ಕೆ ತಿಳಿವಳಿಕೆ ನೀಡಲು, ದೌರ್ಜನ್ಯ ವಿರುದ್ಧ ಎಲ್ಲರೂ ಸೇರಿ ದನಿ ಎತ್ತಲು ಇಂಥ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಉತ್ತರವಾಗಿ ನ್ಯಾಯಾಧೀಶರು ಹೇಳಿದರು.
ಆಧುನಿಕತೆ, ಬಹುರಾಷ್ಟ್ರೀಯ ಉದ್ಯಮ, ಬಂಡವಾಳಶಾಹಿತ್ವ ಹೆಚ್ಚುತ್ತಿದ್ದಂತೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಾ ಬರುತ್ತಿದೆ. ಹಿಂದೆ ಸಣ್ಣ ಪುಟ್ಟ ಪ್ರಮಾಣದಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದವು. ಈಗ ದೌರ್ಜನ್ಯ ನಡೆದರೆ ತಕ್ಷಣ ಬೆಳಕಿಗೆ ಬರುತ್ತದೆ. ದೌರ್ಜನ್ಯ ನಿಲ್ಲಬೇಕಿದ್ದರೆ, ಆರೋಪಿಗಳಿಗೆ ಶಿಕ್ಷೆ ಆಗಬೇಕು. ಈ ನಿಟ್ಟಿನಲ್ಲಿ ದೂರು ಕೊಟ್ಟು, ವಿಚಾರಣೆ ವೇಳೆ ಸೂಕ್ತ ಮಾಹಿತಿ, ದಾಖಲೆ ನೀಡಬೇಕಾಗುತ್ತದೆ. ಯಾವುದೇ ಭಯದ ಅಗತ್ಯವಿಲ್ಲ ಎಂದು ಅವರು ಹೇಳಿದರು.
ದೌರ್ಜನ್ಯದ ವಿರುದ್ಧ ಹೋರಾಟದ ಜತೆಗೆ, ಮಹಿಳೆಯರು ತಮ್ಮ ಹಕ್ಕು, ಘಟನೆ ಉಳಿಸಿಕೊಳ್ಳಲು ಕೂಡಾ ಮೌನ ಮುರಿಯಬೇಕಾಗುತ್ತದೆ. ದೇಶದ ಶೇ.50ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಮಹಿಳಳೆಯರಿಗೆ ಸೂಕ್ತ ಸ್ಥಾನಮಾನ ಸಿಗಲೇಬೇಕು. ಇದಕ್ಕಾಗಿ ನಿರಂತರ ಹೋರಾಟ ಮಾಡುವ ಅಗತ್ಯವಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಇಲಾಖೆ ನಿಮ್ಮ ರಕ್ಷಣೆಗೆ ಇದೆ ಎಂದು ಅವರು ತಿಳಿಸಿದರು.
ಬ್ರೇಕ್‌ಥ್ರೂ ಸಂಘಟನೆ ಉಪನಿರ್ದೇಶಕಿ ಊರ್ವಶಿ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್ ಬಿ., ಮಂಗಳೂರು ಬಾರ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಪಿ. ಚಂಗಪ್ಪ, ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಮಂಗಳೂರು ವಿವಿ ಎನ್‌ಎಸ್‌ಎಸ್ ಸಂಯೋಜಕಿ ಪ್ರೊ.ವಿನೀತಾ ರೈ, ಸೈಂಟ್ ಆ್ಯಗ್ನೇಸ್ ಕಾಲೇಜಿನ ಪ್ರಿನ್ಸಿಪಾಲ್ ಸಿಸ್ಟರ್ ಸುಪ್ರಿಯಾ ಉಪಸ್ಥಿತರಿದ್ದರು. ಬ್ರೇಕ್‌ಥ್ರೂ ಸಂಸ್ಥೆಯ ಮಂಜುಳಾ ಸುನಿಲ್ ಸ್ವಾಗತಿಸಿದರು.