ಕುಂದಾಪುರ: ಕನ್ನಡ ಶಾಲಾ ಶೈಕ್ಷಣಿಕ ಗುಣಮಟ್ಟವನ್ನು ಹಡಚ್ಚಿಸುವ ಸಲುವಾಗಿ ಕುಂದಾಪುರ ತಾಲೂಕಿನಲ್ಲಿ ಪಠ್ಯ ಶಿಕ್ಷಣದೊಂದಿಗೆ ಪೂರಕ ಶಿಕ್ಷಣ ನೀಡುವಲ್ಲಿ ಶಾಲಾ ಶಿಕ್ಷಕರು ಹೆಜ್ಜೆ ಇಡುತ್ತಿರುವಂತೆಯೇ ಹಳೆಯ ಕಾಲದ ಶಿಲಾಶಾಸನಗಳು, ಶಾಸನ ಕಲ್ಲುಗಳು ಮತ್ತು ಓಲೆಗರಿಯ ಕಾವ್ಯ ಸಂಪುಟಗಳು ಪತ್ತೆಯಾಗುತ್ತಿವೆ.
ಇಂತಹುದೇ ಒಂದು ಅಪರೂಪದ ಓಲೆಗರಿಯ ಕಾವ್ಯ ಸಂಪುಟವೆನ್ನಲಾದ ಹಳೆ ಗನ್ನಡ ರೂಪದ ಶಬ್ಧಭಂಡಾರವಿರುವ ಅಜೀರ್ಣಾವಸ್ಥೆಯಲ್ಲಿರುವ ಓಲೆಗರಿಗಳ ಕಟ್ಟೊಂದು ಕುಂದಾಪುರ ತಾಲೂಕು ವಂಡ್ಸೆ ಗ್ರಾಮದ ಅಡಕೆಕೊಡ್ಲು ಹೆಬ್ಬಾಗಿಲು ಮನೆ ರಾಜೀವ ಶೆಟ್ಟಿಯವರ ಮನೆಯಲ್ಲಿ ಅವರ ಮಗ ಶ್ರೀರಕ್ಷಾ ಎಂಬ ಹತ್ತನೇ ತರಗತಿ ವಿದ್ಯಾರ್ಥಿಗೆ ದೊರಕಿದೆ.
ಪಠ್ಯ ಪೂರಕ ಶಿಕ್ಷಣದ ಅಂಗವಾಗಿ ಹಕ್ಲಾಡಿಯ ಸರ್ಕಾರೀ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾಚೀನ ಕಾಲದ ಶಾಸನ ಮತ್ತು ತಾಳಪತ್ರಗಳನ್ನು ಹುಡುಕುವ ಅಭಿಯಾನ ಆರಂಭಿಸಿದ್ದು, ಈ ಸಂದರ್ಭದಲ್ಲಿ ರಾಜೀವ ಶೆಟ್ಟಿ ಹಾಗೂ ಶಾರದಾ ದಂಪತಿಗಳ ಪುತ್ರ ಹಕ್ಲಾಡಿ ಸ.ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಶ್ರೀರಕ್ಷ ತನ್ನ ಮನೆಯಲ್ಲಿ ಶೋಧ ನಡೆಸಿದ ಸಂದರ್ಭ ಕನ್ನಡ ಬರಹವಿರುವ ಓಲೆಗರಿಗಳ ಸಂಪುಟವಿದಾಗಿದ್ದು, ಸುಂದರವಾದ ಕೈ ಬರೆಹವನ್ನು ಹೊಂದಿದ ಈ ತಾಡ(ಳೆ) ಪತ್ರ ಯಾವುದೋ ಪುರಾಣ ಕಾವ್ಯವಿರಬೇಕೆಂದು ಮೇಲ್ನೋಟಕ್ಕೆ ಕಾಣುತ್ತದೆ. ಸರಿಯಾದ ನಿರ್ವಹಣೆ ಇಲ್ಲದೆ ಈ ತಾಳೆಪತ್ರ ಶಿಥಿಲಾವಸ್ಥೆಯಲ್ಲಿದ್ದು, ಹಳೆಗನ್ನಡ ಕಾವ್ಯ ಬಲ್ಲ ತಜ್ಞರಿಂದಷ್ಟೇ ಒಳ ಹೂರಣ ತಿಳಿಯಬೇಕಿದೆ.