ಕುಂದಾಪುರ: ಇತಿಹಾಸ ಪ್ರಸಿದ್ಧ ಕುಂದಾಪುರ ತಾಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಬ್ರಹ್ಮರಥೋತ್ಸವ ಮತ್ತು ಅಷ್ಟೋತ್ತರ ನಾಳಿಕೇರ ಮಹಾಗಣಪತಿಯಾಗ ನ.೨೬ ಬುಧವಾರ ಸಂಭ್ರಮ ಹಾಗೂ ಸಡಗರದಿಂದ ಸಾಂಗವಾಗಿ ಜರುಗಿತು.
ರಥೋತ್ಸವದ ದಿನವಾದ ಬುಧವಾರ ಬೆಳಿಗ್ಗಿನಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನದ ಸುಮಾರಿಗೆ ನಡೆದ ಮಹಾಮಂಗಳಾರತಿ ಬಳಿಕ ನಡೆದ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಘೊಂಡು ಭಕ್ತಿಯನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ಆಗಮಿಸುವ ಎಲ್ಲಾ ಭಕ್ತರಿಗೂ ಪಾನಕ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಅನುವಂಶಿಕ ಧರ್ಮದರ್ಶಿಗಳಾದ ಕೆ. ಲಕ್ಷ್ಮೀನಾರಾಯಣ ಉಪಾಧ್ಯಾಯ, ಕೆ. ಶ್ರೀರಮಣ ಉಪಾಧ್ಯಾಯ ಹಾಗೂ ಅನುವಂಶಿಕ ಪರ್ಯಾಯ ಅರ್ಚಕ ಕೆ. ಗಣೇಶ ಉಪಧ್ಯಾಯ ಮತ್ತು ಸಹೋದರರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು.
ಕುಂದಾಪುರ ಡಿವೈಎಸ್ಪಿ ಸಿ.ಬಿ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ವೃತ್ತನಿರೀಕ್ಷಕ ದಿವಾಕರ್ ಪಿ.ಎಂ., ಉಪನಿರೀಕ್ಷಕ ನಾಸೀರ್ ನೇತೃತ್ವದ ಭದ್ರತೆ ಹಾಗೂ ಸಂಚಾರಿ ಠಾಣೆಯ ಉಪನಿರೀಕ್ಷಕ ಇಮ್ರಾನ್, ದೇವೇಂದ್ರ ಹಾಗೂ ಸಿಬ್ಬಂದಿಗಳು ಸಂಚಾರಿ ವ್ಯವಸ್ಥೆಯನ್ನು ನಿರ್ವಹಿಸಿದರು.
ಇಂದು(ಗುರುವಾರ) ಬೆಳಿಗ್ಗೆ ಚೂರ್ಣೋತ್ಸವ, ಅವಭೃತ ಸ್ನಾನ, ವಸಂತಾರಾಧನೆ ಹಾಗೂ ಮಂತ್ರಾಕ್ಷತೆ ಕಾರ್ಯಕ್ರಮ ಜರುಗಲಿದೆ.