ಕನ್ನಡ ವಾರ್ತೆಗಳು

ನ್ಯಾಯಾಧೀಶರ ಮುದ್ರೆ ಹಾಗೂ ಹಸ್ತಾಕ್ಷರ ಪೋರ್ಜರಿ : ಆರೋಪಿ ಎ.ಸಿ.ಜಯರಾಜ್ ಬಂಧನಕ್ಕೆ ಆಗ್ರಹಿಸಿ ಧರಣಿ

Pinterest LinkedIn Tumblr

AC-Jayaraj_Forgery_case

ಮಂಗಳೂರು, ನ.27: ಜಿಲ್ಲಾ ನ್ಯಾಯಾಧೀಶರ ಮುದ್ರೆ ಹಾಗೂ ಹಸ್ತಾಕ್ಷರ ಪೋರ್ಜರಿ ಮಾಡಿ ಬ್ಯಾಂಕ್‌ಹಾಗೂ ಅಪಘಾತ ಸಂತ್ರಸ್ತರನ್ನು ವಂಚಿಸಿದ ನ್ಯಾಯವಾದಿ ಎ.ಸಿ ಜಯರಾಜ್‌ರನ್ನು ಬಂಧಿಸದಿರುವ ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿ ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬುಧವಾರ ಸಿಪಿಎಂ ಮಂಗಳೂರು ನಗರ ದಕ್ಷಿಣ ಹಾಗೂ ಉತ್ತರ ಸಮಿತಿಗಳ ಜಂಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಆರೋಪಿ ನ್ಯಾಯವಾದಿ ಎ.ಸಿ ಜಯರಾಜ್ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿದ್ದು, ಆ ಕಾರಣಕ್ಕಾಗಿಯೇ ಆರೋಪಿಯನ್ನು ಪೊಲೀಸ್ ಇಲಾಖೆ ಬಂಧಿಸಿಲ್ಲ ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯ ವಸಂತ ಆಚಾರಿ ಆರೋಪಿಸಿದರು.

ಪೊಲೀಸ್ ಇಲಾಖೆಯ ಕೆಲವು ಸಿಬ್ಬಂದಿ ಹಾಗೂ ಎ.ಸಿ ಜಯರಾಜ್‌ರಂತಹ ಕೆಲವು ನ್ಯಾಯವಾದಿಗಳ ಮಧ್ಯೆ ಅಕ್ರಮ ಸಂಬಂಧವಿದೆ. ಅಪಘಾತಗಳ ಸಂದರ್ಭದಲ್ಲಿ ವಿಮಾ ಪರಿಹಾರ ಪಡೆದು ಸಂತ್ರ ಸ್ತರ ಕುಟುಂಬಕ್ಕೆ ಕೊಡಿಸುವ ವ್ಯವಹಾರವನ್ನು ಎ.ಸಿ. ಜಯರಾಜ್‌ರಂತಹ ವಕೀಲರು ಮಾಡುತ್ತಿದ್ದಾರೆ. ಅಪಘಾತ ಆಗಿ ವ್ಯಕ್ತಿಯೊಬ್ಬ ಜೀವನ್ಮರಣ ಹೋರಾಟದಲ್ಲಿರುವಾಗ ಅವರಿಗೆ ಚಿಕಿತ್ಸೆಯ ಅಗತ್ಯ ಒದಗಿಸುವ ಮೊದಲೇ ಪೊಲೀಸರ ಮೂಲಕ ಜಯರಾಜ್‌ ರಂತಹ ವಕೀಲರು ಹಾಜರಾಗುತ್ತಾರೆ. ಅಪಘಾತ ವಿಮೆಯನ್ನು ಸಂತ್ರಸ್ತ ಕುಟುಂಬಗಳಿಗೆ ತೆಗೆಸಿಕೊಡುವಾಗ ದೊಡ್ಡ ಮೊತ್ತವನ್ನು ಕಬಳಿಸಲಾಗುತ್ತದೆ. ಇಂಥ ದುರುದ್ದೇಶದ ಕಾರ್ಯದಲ್ಲೇ ನ್ಯಾಯಾಧೀಶರ ಮುದ್ರೆ ಸಹಿಯನ್ನು ಪೋರ್ಜರಿ ಮಾಡಿ ಜಯರಾಜ್ ಸಿಕ್ಕಿ ಬಿದ್ದಿದ್ದಾರೆ. ಜಿಲ್ಲಾ ನ್ಯಾಯಾಧೀಶರೇ ಪೊಲೀಸರಿಗೆ ದೂರು ನೀಡಿದ್ದರೂ, ಜಯರಾಜ್‌ರನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸದಿರುವುದು ಖಂಡನೀಯ. ಈ ಬಗ್ಗೆ ಕಾಂಗ್ರೆಸ್ ಮುಖಂಡರು ಮಾತನಾಡದಿರುವುದು ವಿಪರ್ಯಾಸ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದರು.

ಸಿಪಿಎಂ ಮಂಗಳೂರು ನಗರ ಉತ್ತರ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಕೊಂಚಾಡಿ, ಡಿವೈಎಫ್‌ಐ ಮಂಗಳೂರು ನಗರ ಸಮಿತಿ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿದರು. ಹೋರಾಟದ ನೇತೃತ್ವವನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಮುಖಂಡರಾದ ವಾಸುದೇವ ಉಚ್ಚಿಲ, ಪದ್ಮಾವತಿ ಶೆಟ್ಟಿ, ಪಕ್ಷದ ನಗರ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ, ಮುಹಮ್ಮದ್ ಸಾದಿಕ್, ಬಶೀರ್ ಪಂಜಿಮೊಗರು, ಸುರೇಶ್ ಬಜಾಲ್, ಭಾರತಿ ಬೋಳಾರ ಇದ್ದರು.

Write A Comment