ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲ ಬೀಗ ಮುರಿದು ಮನೆಯೊಳಗೆ ನುಗ್ಗಿದ ಚೋರರು ಮನೆಯೆಲ್ಲಾ ಜಾಲಾಡಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ದೇವರ ಕೋಣೆಯಲ್ಲಿದ್ದ ಬೆಳ್ಳಿಯ ಸಾಮಗ್ರಿಗಳನ್ನು ಕದ್ದೊಯ್ದ ಘಟನೆ ಕೋಟೇಶ್ವರದ ಚಿಕ್ಕಮ್ಮ ದೈವದ ಮನೆ ಸಮೀಪ ನಿವಾಸಿ ಲಕ್ಷ್ಮಣ ರಾವ್ ಎಂಬುವರ ಮನೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಲಕ್ಷ್ಮಣ ರಾವ್ ಕೋಟೇಶ್ವರದಲ್ಲಿ ಮೊಬೈಲ್ ಶಾಪ್ ನಡೆಸಿಕೊಂಡಿರುತ್ತಿದ್ದು ಅಪ್ಪ ಮಗ ಇಬ್ಬರೂ ಪ್ರತಿನಿತ್ಯ ತಡವಾಗಿ ಮನೆ ಸೇರುತ್ತಿದ್ದರು. ಅಲ್ಲದೇ ಗುರುವಾರ ಸಂಜೆ ಸುಮಾರು ೬.೩೦ಕ್ಕೆ ಮನೆಯಲ್ಲಿದ್ದ ಮಹಿಳೆ ಕಾಳಾವರ ಷಷ್ಟಿಗೆ ಹೋಗಿದ್ದರು. ಇದೇ ಸಂದರ್ಭ ನೋಡಿದ ಚೋರರು ಮನೆಯ ಮುಖ್ಯದ್ವಾರದ ಬೀಗ ಒಡೆದು ಒಳನುಗ್ಗಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಬ್ಬಿಣದ ಕಪಾಟಿನ ಬೀಗವನ್ನೂ ಒಡೆದು ಹಾಕಿ ಶೋಧಿಸಿದ್ದಾರೆ. ಕೊನೆಗೆ ದೇವರ ಕೋಣೆಯಲ್ಲಿಡಲಾಗಿದ್ದ ಬೆಳ್ಳಿಯ ಹರಿವಾಣ(ತಟ್ಟೆ), ಬೆಳ್ಳಿಯ ೫ ಹಣತೆಗಳನ್ನು ದೋಚಿ ಪರಾರಿಯಾಗಿದ್ದಾರೆ. ರಾತ್ರಿ ಸುಮಾರು ೯.೩೦ಕ್ಕೆ ಮನೆಗೆ ಬಂದಾಗ ವಿಚಾರ ತಿಳಿದು ಬಂದಿದೆ.
ಶಂಕಿತನ ಬಂಧನ : ಮನೆಕಳವು ಯತ್ನಕ್ಕೆ ಸಂಬಂಧಿಸಿ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ, ಅದೇ ಸಂಧರ್ಭ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಕೋಟೇಶ್ವರದಲ್ಲಿ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತದ್ದ ಅನುಮಾನಾಸ್ಪದೆ ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದುದನ್ನು ಗಮನಿಸಿದ ಪೊಲೀಸರು ಹಾಗೂ ಸ್ಥಳೀಯರು ಪ್ರಶ್ನೆ ಕೇಳುವಷ್ಟರಲ್ಲಿ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದನಾದರೂ, ಸ್ಥಳೀಯರು ಆತನನ್ನು ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆಯ ನಂತರ ಸತ್ಯ ಹೊರಬೀಳಬೇಕಿದೆ.