ಕುಂದಾಪುರ: ಕ್ಷುಲ್ಲಕ ಕಾರಣಕ್ಕಾಗಿ ಎರಡು ಕೋಮುಗಳ ಯುವಕರ ತಂಡಗಳ ನಡುವೆ ನಡೆದ ಘರ್ಷಣೆ ಸಂದರ್ಭ ವರದಿಗೆ ತೆರಳಿದ ಪತ್ರಕರ್ತನಿಗೆ ಹಲ್ಲೆ ನಡೆಸಿ, ಬೈಕ್ ಪುಡಿಗಟ್ಟಿದ ಘಟನೆ ಗುರುವಾರ ರಾತ್ರಿ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲ್ಗಂಗೊಳ್ಳಿಯಲ್ಲೆ ನಡೆದಿದೆ. ಪತ್ರಕರ್ತ ಗಂಗೊಳ್ಳಿಯ ಬಿ. ರಾಘವೇಂದ್ರ ಪೈ ಎಂಬುವರೇ ಹಲ್ಲೆಗೊಳಗಾಗದವರು. ಇನ್ನೊಂದು ತಂಡ ಹನೀಫ ಎಂಬಾತ ಕುಂದಾಪುರದ ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾನೆಂದು ತಿಳಿದುಬಂದಿದೆ.
ಘಟನೆಯ ವಿವರ: ಕೋಮು ಸೂಕ್ಷ್ಮ ಪ್ರದೇಶವೆಂದೇ ಬಿಂಬಿತವಾದ ಗಂಗೊಳ್ಳಿಯಲ್ಲಿ ಎರಡೂ ಕೋಮುಗಳ ನಡುವೆ ಬೇರೆ ಬೇರೆ ಕಾರಣಕ್ಕೆ ಸೃಷ್ಟಿಯಾಗಿದ್ದ ದ್ವೇಷ ಬೂದಿ ಮುಚ್ಚಿದ ಕೆಂಡದಂತಿತ್ತು. ಯಾವುದೋ ಕ್ಷುಲ್ಲಕ ಕಾರಣಕ್ಕೆ ಗುರುವಾರ ರಾತ್ರಿ ಸುಮಾರು ೧೦ ಗಂಟೆಗೆ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದೆ. ಈ ಸಂದರ್ಭ ಒಂದು ಕೋಮಿನ ಯುವಕರ ತಂಡ ಸೋಡಾ ಬಾಟಲಿಗಳನ್ನು ಎಸೆದಿದೆ. ಇದನ್ನು ಪ್ರಶ್ನಿಸಲು ಇನ್ನೊಂದು ತಂಡ ಅಲ್ಲಿಗೆ ತೆರಳುವ ಸಂದರ್ಭ ಪೊಲೀಸರು ಘರ್ಷಣೆ ತಪ್ಪಿಸುವ ಸಲುವಾಗಿ ತಡೆದಿದ್ದಾರೆ.
ಪತ್ರಕರ್ತನ ಮೇಲೆ ಹಲ್ಲೆ : ಘರ್ಷಣೆ ನಡೆದ ಮಾಹಿತಿ ಪಡೆದ ಪತ್ರಕರ್ತ ಬಿ. ರಾಘವೇಂದ್ರ ಪೈ ವರದಿ ಮಾಡಲೆಂದು ಘಟನಾ ಸ್ಥಳಕ್ಕೆ ತೆರಳಿದ ಸಂದರ್ಭ ಒಂದು ತಂಡ ಪತ್ರಕರ್ತ ರಾಘವೇಂದ್ರ ಪೈ ಚಲಾಯಿಸುತ್ತಿದ್ದ ಬೈಕನ್ನು ಅಡ್ಡಗಟ್ಟಿದ್ದಾರೆ. ಯಾಕೆ ಅಡ್ಡಗಟ್ಟಿದ್ದೀರಿ ಎನ್ನುವಷ್ಟರಲ್ಲಿಯೇ ತಂಡದಲ್ಲಿ ಕೆಲವರು ದೊಣ್ಣೆ ಹಿಡಿದುಕೊಂಡು ಬಂದು ಬೈಕ್‌ನ ಮುಂಭಾಗವನ್ನು ಜಖಂ ಮಾಡಿದ್ದಾರೆ. ಮತ್ತೆ ಕೆಲವರು ಅವರನ್ನು ದೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಸಂದರ್ಭ ರಾಘವೇಂದ್ರ ಪೈ ಕೈಗೆ ಒಳಗಾಯಗಳಾಗಿದ್ದು, ಹಲ್ಲೆ ನಡೆಸಿದ ತಂಡದಲ್ಲಿದ್ದ ಕೆಲವರು ಹಲ್ಲೆ ನಡೆಸುವುದನ್ನು ತಡೆದು ಪತ್ರಕರ್ತರಿಗೆ ರಕ್ಷಣೆ ನೀಡಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಪ್ರಕರಣವನ್ನು ತಿಳಿಗೊಳಿಸಿದ್ದಾರೆ. ಮುಂಭಾಗ ನುಜ್ಜುಗುಜ್ಜಾದ ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ
ಯಾಕೆ ಘರ್ಷಣೆ : ಒಂದು ಕೋಮಿನ ಯುವಕರ ತಂಡ ರಾತ್ರಿಯ ವೇಳೆ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಗಂಗೊಳ್ಳಿಗ್ಗೆ ವಾಪಾಸ್ಸಾಗುತ್ತಿದ್ದ ವೇಳೆ ಇನ್ನೊಂದು ಕೋಮಿನ ಯುವಕರ ತಂಡ ಮೇಲ್ಗಂಗೊಳ್ಳಿ ಎಂಬಲ್ಲಿ ಬಾಟಲಿ ಎಸೆದಿದ್ದಾರೆ. ಆದರೆ ಬೈಕಿನಲ್ಲಿ ಬರುತ್ತಿದ್ದುದರಿಂದ ಯಾವುದೇ ಅಪಾಯ ನಡೆಯಲಿಲ್ಲ. ಇದನ್ನು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದು ಪರಿಸ್ಥಿತಿ ತಿಯಾಗುತ್ತಿದ್ದಂತೆ, ವರದಿಗಾಗಿ ಬಂದ ರಾಘವೇಂದ್ರ ಪೈ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಘರ್ಷಣೆಗೆ ಸಂಬಂಧಿಸಿ ಒಂದು ಕೋಮಿನ ಇಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೆ, ಇನ್ನೊಂದು ಕೋಮಿನ ವ್ಯಕ್ತಿ ಕುಂದಾಪುರದ ಸರ್ಕಾರೀ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪ್ರತಿದೂರು ನೀಡಿದ್ದಾನೆ. ಹಲ್ಲೆಗೊಳಗಾದ ಪತ್ರಕರ್ತ ರಾಘವೇಂದ್ರ ಪೈ ಕೂಡಾ ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನವೀನ್ ಎಂಬಾತ ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹನೀಫ್ ಮತ್ತು ಇಲಿಯಾಜ್ ಎಂಬುವರು ಸುಮಾರು ೪೦ಕ್ಕೂ ಹೆಚ್ಚು ಜನರಿದ್ದ ತಂಡದೊಂದಿಗೆ ಸೇರಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೂರಿದರೆ, ಹನೀಫ್ ಆಸ್ಪತ್ರೆಗೆ ದಾಖಲಾಗಿ, ಪ್ರತಿದೂರು ದಾಖಲಿಸಿದ್ದಾರೆಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಕುಂದಾಪುರ ವೃತ್ತ ನಿರೀಕ್ಷಕ ಪಿ.ಎಂ.ದಿವಾಕರ ಹಾಗೂ ಪೊಲೀಸ್ ಉಪನಿರೀಕ್ಷಕರು ಬಂದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ನೇಮಕಮಾಡಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ.