ಮಂಗಳೂರು, ನ.28 : 1986ರ ಫೆ.6 ರಂದು ಸಂತ ಪೋಪ್ ಜಾನ್ ಪಾವ್ಲ್ -2 ಭಾರತಕ್ಕೆ ಬಂದಾಗ ಭೇಟಿ ಕೊಟ್ಟ ಸಂದರ್ಭ ಬಜಪೆ ವಿಮಾನ ನಿಲ್ದಾಣದಲ್ಲಿ ಇಳಿದು ಸಮೀಪದಲ್ಲೇ ಪ್ರವಚನ ಮಾಡಿದ್ದ ಜಾಗದಲ್ಲಿ ಅವರ ಗೌರವಾರ್ಥ ಮಂಗಳೂರು ಧರ್ಮಪ್ರಾಂತ್ಯದ ಭಕ್ತಾದಿಗಳ ದಾನದ ಸಹಾಯದಿಂದ ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಪುಣ್ಯಕ್ಷೇತ್ರದ ಉದ್ಘಾಟನಾ ಸಮಾರಂಭ ಹಾಗೂ ಬಲಿಪೂಜೆ ಗುರುವಾರ ನಡೆಯಿತು.
ಭಾರತದ ರಾಯಭಾರಿ ಆರ್ಚ್‌ಬಿಷಪ್ ಸಾಲ್ವದೋರ್ ಪೆನಾಚಿಯೋ ಅವರು ನೂತನ ಪುಣ್ಯಕ್ಷೇತ್ರವನ್ನು ಉದ್ಘಾಟಿಸಿ,ಆಶಿರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ನ.23ರಂದು ಪುಣ್ಯಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಆರು ಅಡಿ ಎತ್ತರ ಹಾಗೂ ಸುಮಾರು ಒಂಬತ್ತು ಕ್ವಿಂಟಾಲ್ ತೂಕದ ದಿ| ಪೋಪ್ ಅವರ ಆಕರ್ಷಕ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಈ ಪ್ರತಿಮೆಯನ್ನು ಪೋಪ್ ರಾಯಭಾರಿ ಆರ್ಚ್‌ಬಿಷಪ್ ಸಾಲ್ವದೋರ್ ಪೆನಾಚಿಯೋ ಅವರು ಕೊಡುಗೆಯಾಗಿ ನೀಡಿದ್ದರು.
ಸಮಾರಂಭದಲ್ಲಿ ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಸೇರಿದಂತೆ ೭ ಮಂದಿ ಬಿಷಪರು ಭಾಗವಹಿಸಿದ್ದರು. ಉಡುಪಿ ಬಿಷಪ್ ರೈ|ರೆ|ಜೆರಾಲ್ಡ್ ಐಸಾಕ್ ಲೋಬೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಚಿವರಾದ ಕೆ.ಅಭಯಚಂದ್ರ ಜೈನ್, ಶಾಸಕರಾದ ಜೆ.ಆರ್.ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಬಜಪೆ ಪಂಚಾಯತ್ ಅಧ್ಯಕ್ಷ ವಿಜಯಾ ಜೆ.ಸುವರ್ಣ ಮುಂತಾದವರು ಗೌರವ ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಪ್ರಧಾನ ಗುರು ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭು, ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ. ವಿಲಿಯಂ ಮಿನೇಜಸ್, ಮಾರ್ಸೆಲ್ ಮೊಂತೆರೊ, ಸೆನೆಟ್ ಮಂಡಳಿ ಕಾರ್ಯದರ್ಶಿ ಫಾ. ಜೋಸೆಫ್ ಮಾರ್ಟಿಸ್, ಧರ್ಮಪ್ರಾಂತ್ಯದ ಪಾಲನ ಸಮಿತಿ ಕಾರ್ಯದರ್ಶಿ ಎಂ.ಪಿ.ನೊರೊನ್ಹಾ, ಬಜ್ಪೆ ಚರ್ಚಿನ ಧರ್ಮಗುರು ಫಾ.ಲಿಯೊ ಲೋಬೊ, ಉದ್ಯಮಿಗಳಾದ ಇ ಫರ್ನಾಂಡಿಸ್ ಮತ್ತು ರೈಮಂಡ್ ಡಿಕುನ್ಹಾ ಉಪಸ್ಥಿತರಿದ್ದರು.