ನವದೆಹಲಿ: ನ, 28 : ಭಾರತ ಮತ್ತು ಪಾಕಿಸ್ತಾನ ಸೈನಿಕರ ನಡುವೆ ಪ್ರತಿದಿನ ಗುಂಡಿನ ಕಾಳಗ ನಡೆಯುತ್ತಲೇ ಇದೆ. ದೇಶದೊಳಕ್ಕೆ ಪಾಕಿಸ್ತಾನದಿಂದ ಒಳನುಸುಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆಲ್ಲ ಪರಿಹಾರ ಕಲ್ಪಿಸಲು ಗಡಿ ಭದ್ರತಾ ಪಡೆ ಪ್ರಸ್ತಾವನೆಯೊಂದನ್ನು ಕೇಂದ್ರ ಸರ್ಕಾರದ ಮುಂದೆ ಇರಿಸಿದೆ. ಗಡಿಯೊಳಗೆ ಪಾಕಿಸ್ತಾನದಿಂದ ಉಗ್ರಗಾಮಿಗಳು ಒಳನುಸುಳುವುದನ್ನು ತಡೆಯಲು ಲೇಸರ್ ಗೋಡೆ ನಿರ್ಮಿಸುವ ಪ್ರಸ್ತಾಪವನ್ನು ಬಿಎಸ್ ಎಫ್ ಕೇಂದ್ರ ಸರ್ಕಾರದ ಮುಂದಿರಿಸಿದೆ. ಯಾವುದೇ ವ್ಯಕ್ತಿ ಲೇಸರ್ ಕಿರಣಗಳನ್ನು ದಾಟಿ ಒಳಕ್ಕೆ ಬರಲು ಸಾಧ್ಯವಿಲ್ಲ. ಒಂದು ವೇಳೆ ಅಂಥ ಪ್ರಯತ್ನ ನಡೆಸಿದರೆ ಎಚ್ಚರಿಕೆ ಗಂಟೆ ಬಾರಿಸುತ್ತದೆ. ಇದರಿಂದ ಸುಲಭವಾಗಿ ಒಳನುಸುಳುವಿಕೆ ತಡೆಯಬಹುದು ಎಂದು ಸಲಹೆ ನೀಡಿದೆ.
ಕೆಲವೆಡೆ ದುಷ್ಕರ್ಮಿಗಳು ಸುರಂಗ ಕೊರೆದು ಒಳನುಸುಳುತ್ತಿದ್ದಾರೆ. ಭದ್ರತಾ ಪಡೆಯೂ ಎಲ್ಲ ಕಡೆ ಬೇಲಿ ಅಳವಡಿಸಿದ್ದರೂ ಪಾಕ್ ಗಡಿಯಲ್ಲಿ ನುಸುಳುಕೋರರ ತಡೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಲೇಸರ್ ಕಿರಣಗಳನ್ನು ಭೂಮಿಗೂ ಹಾಯಿಸುವುದು ಉತ್ತಮ. ಸುರಂಗ ಕೊರೆಯಲು ಮುಂದಾದರೆ ಉಂಟಾಗುವ ಕಂಪನಗಳು ಸ್ಪಷ್ಟ ಮಾಹಿತಿ ರವಾನಿಸುತ್ತವೆ ಎಂದು ಬಿಎಸ್ ಎಫ್ ವರದಿಯಲ್ಲಿ ತಿಳಿಸಿದೆ. ಪಂಜಾಬ್ ಮತ್ತು ಪಾಕ್ ಗಡಿಯಲ್ಲಿ ನುಸುಳುಕೋರರ ಹಾವಳಿ ಅತಿಯಾಗಿದೆ. ತಂತ್ರಜ್ಞಾನದ ಆವಿಷ್ಕಾರ ಬಳಸಿಕೊಳ್ಳುವುದು ಉತ್ತಮ. ದೇಶದ ರಕ್ಷಣೆ ಮತ್ತು ಭದ್ರತೆಗೆ ಇಂಥ ಕ್ರಮ ತೆಗೆದುಕೊಳ್ಳಬೇಕಾದ್ದು ಅನಿವಾರ್ಯ ಎಂದು ಹೇಳಿದೆ. ಅಲ್ಲದೇ ಥರ್ಮಲ್ ಸೆನ್ಸಾರ್ ಅಳವಡಿಕೆ ಮಾಡಬೇಕು. ಇದರಿಂದ ಯಾವುದೇ ವ್ಯಕ್ತಿ ಪಾಕ್ ಗಡಿಯಿಂದ ಭಾರತದತ್ತ ನುಗ್ಗುತ್ತಿದ್ದರೆ ತಕ್ಷಣ ಮಾಹಿತಿ ದೊರೆಯುತ್ತದೆ ಎಂದು ಹೇಳಿದೆ.