ಮಂಗಳೂರು,ನ.28: ದಿ| ವಿ.ಎಸ್. ಕುಡ್ವರು ಓರ್ವ ಅಸಾಧಾರಣ ಪ್ರತಿಭಾವಂತ ಹಾಗೂ ಮಹಾನ್ ಸಾಧಕ ಹಾಗೂ ಬಹುಮುಖ ಪ್ರತಿಭೆಯ ದೂರದೃಷ್ಟಿತ್ವವುಳ್ಳ ಶ್ರೇಷ್ಠ ಮಾದರೀ ವ್ಯಕ್ತಿತ್ವ. ಅವರ ತಾಂತ್ರಿಕ ಕೌಶಲ್ಯತೆ ಮತ್ತು ವೃತ್ತಿ ಪ್ರಾವಿಣ್ಯತೆಯಿಂದ ಸಾರಿಗೆ ಸಂಚಾರ ಕೈಗಾರಿಕೋದ್ಯಮದ ಕ್ರಾಂತಿಕಾರ ಮತ್ತು ಪತ್ರಿಕೋದ್ಯಮದ ಸರದಾರ ಎಂದು ಪರಿಗಣಿಸಲ್ಪಟ್ಟವರು. ಜಿಲ್ಲೆಯ ಆರ್ಥಿಕ, ವಾಣಿಜ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹೋನ್ನತ ಸಾಧನೆಗೈದು ಹೆಸರು ಮತ್ತು ಖ್ಯಾತಿ ಪಡೆದ ಬೆರಳೆಣಿಕೆಯ ಮಹನೀಯರಲ್ಲಿ ಒಬ್ಬರು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಯವರಾದ ಡಾ| ಎನ್. ವಿನಯ್ ಹೆಗ್ಡೆಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ನಗರದ ಕೆನರಾ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಹೊಟೇಲ್ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಜರಗಿದ ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರೊ| ಎಂ.ವಿ. ಮಲ್ಯರು ಕುಡ್ವರ ಸ್ಮರಣಾರ್ಥ ರಚಿಸಿದ ಕೃತಿ ವಿ.ಎಸ್. ಕುಡ್ವ – ಜೀವನ ಮತ್ತು ಸಾಧನೆಯ ಆಂಗ್ಲ ಆವೃತ್ತಿಯನ್ನು ಲೋಕಾರ್ಪಣೆಗೈದು, ಮಾತನಾಡಿದರು. ಅವರ ನೇತ್ರತ್ವ ಮತ್ತು ನೆರಳಿನಲ್ಲಿ ಕಾರ್ಯನಿರ್ವಹಿಸಿದ್ದು, ತನ್ನ ಜೀವನದಲ್ಲಿ ಲಭಿಸಿದ ಒಂದು ಅಪೂರ್ವ ಮತ್ತು ಅಮೂಲ್ಯ ಸೌಭಾಗ್ಯ. ಅವರು ಪ್ರತಿಪಾದಿಸಿದ ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ, ವ್ಯವಹಾರ ಕ್ಷಮತೆ ಹಾಗೂ ಮಾರ್ಗದರ್ಶನ ನನ್ನ ದೈನಂದಿನ ಜೀವನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರಿದ್ದು, ನನ್ನ ಆಡಳಿತ ಕೌಶಲ್ಯ ಮತ್ತು ಸಾಧಿಸಿದ ಯಶಸ್ಸನ್ನು ದಿ| ಕುಡ್ವರಿಗೆ ವಿನಮೃವಾಗಿ ಸಮರ್ಪಿಸುತ್ತೇನೆ ಹಾಗೂ ಅವರನ್ನು ಸ್ಮರಿಸದೆ ಕಳೆದ ದಿನವೇ ಇಲ್ಲ ಎಂದು ನುಡಿದರು. ಈ ಸಂದರ್ಭದಲ್ಲಿ ಮಣಿಪಾಲ ಮೂಲದ ದಿ| ಟಿ.ಎಂ.ಎ. ಪೈಯವರ ಕೊಡುಗೆಯನ್ನು ಸ್ಮರಿಸಿದರು.
ಮಣಿಪಾಲ ಮೂಲದ ಸಿಂಡಿಕೇಟ್ ಬ್ಯಾಂಕ್‌ನ ಮಹಾ ಪ್ರಬಂಧಕರಾದ ಶ್ರೀ ಕೆ.ಟಿ. ರೈ ಯವರು ಗೌರವ ಅತಿಥಿಯಾಗಿ ಪಾಲ್ಗೊಂಡು ಕುಡ್ವರ ಜೀವನ ಆಧರಿತ ಕೃತಿಯ ಕನ್ನಡ ಆವೃತ್ತಿಯನ್ನು ಬಿಡುಗಡೆಗೊಳಿಸಿ, ಲೇಖಕ ರೊ| ಎಂ.ವಿ. ಮಲ್ಯರ ಅಪೂರ್ವ ಸಾಧನೆಯನ್ನು ಶ್ಲಾಘಿಸಿದರು. ಕುಡ್ವರು ಸಿಂಡಿಕೇಟ್ ಬ್ಯಾಂಕ್‌ನ ಸ್ಥಾಪಕ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು ಎಂದು ಸ್ಮರಿಸಿ, ಅವರು ಸ್ಥಾಪಿಸಿದ ಬ್ಯಾಂಕ್ ದೇಶದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿದ್ದು, ಪ್ರಸ್ತುತ ದೇಶಾದ್ಯಂತ 3358 ಶಾಖೆಗಳನ್ನು ಹೊಂದಿದ್ದು ಸಾವಿರಾರು ಮಂದಿಗೆ ಉದ್ಯೋಗಗಳನ್ನು ಸೃಷ್ಟಿಸಿ, ಅವರ ಜೀವನೋಪಾಯವನ್ನು ನಿರ್ಮಿಸಿ, 89 ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿ, ಪ್ರತಿವರ್ಷ ಉನ್ನತ ಲಾಭಗಳಿಸಿ ಮುನ್ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಕೆನರಾ ಪ್ರತಿಷ್ಠಾನದ ಅಧ್ಯಕ್ಷರಾದ ರೊ| ಶ್ರೀನಿವಾಸ ಕುಡ್ವರು ಸಮಾರಂಭದ ಅಧ್ಯಕ್ಷತೆ ವಹಿಸಿ, ಆಗಮಿಸಿದ್ದ ಗಣ್ಯರಿಗೆ ಕೃತಿಯ ಪ್ರತಿಗಳನ್ನು ಹಸ್ತಾಂತರಿಸಿದರು. ರೋಟರಿ ಮಾಜಿ ಜಿಲ್ಲಾ ಗವರ್ನರ್ ರೊ| ಡಾ. ದೇವದಾಸ ರೈ ಯವರು ದಿ| ವಿ.ಎಸ್. ಕುಡ್ವರ ಗಣನೀಯ ಸಾಧನೆ ಮತ್ತು ಗಮನಾರ್ಹ ಕೊಡುಗೆಗಳ ಸಂಕ್ಷಿಪ್ತ ಪರಿಚಯ ನೀಡಿದರು. ಲೆಮಿನಾ ಸಂಸ್ಥೆಯ ನಿರ್ದೇಶಕರಾದ ಶ್ರೀ ಬಿ.ಎಸ್. ಬಾಳಿಗಾ ಹಾಗೂ ಉದಯವಾಣಿ ವಾರ್ತಾಪತ್ರಿಕೆಯ ವಾರ್ತಾವಿಭಾಗದ ಮುಖ್ಯಸ್ಥರಾದ ಶ್ರೀ ಮನೋಹರ ಪ್ರಸಾದ್ ರವರು ಸಂದರ್ಭೋಚಿತವಾಗಿ ಮಾತನಾಡಿ, ವಿ.ಎಸ್. ಕುಡ್ವರನ್ನು ಸ್ಮರಿಸಿದರು. ಈ ಸ್ಮರಣೀಯ ಸಂದರ್ಭದಲ್ಲಿ ಕೃತಿಯ ಲೇಖಕ ರೊ| ಎಂ.ವಿ. ಮಲ್ಯರನ್ನು ಗೌರವಿಸಿ, ಸನ್ಮಾನಿಸಲಾಯಿತು. ಕೆನರಾ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಪ್ರೇಮನಾಥ ಕುಡ್ವ ಸ್ವಾಗತಿಸಿದರು. ಕೆನರಾ ವರ್ಕ್‌ಶಾಪ್ಸ್ ಸಂಸ್ಥೆಯ ಉಪ ಮಹಾಪ್ರಬಂಧಕರಾದ ಶ್ರೀ ಉಮನಾಥ ಭಟ್ ನಿರೂಪಿಸಿದ ಕಾರ್ಯಕ್ರಮದಲ್ಲಿ, ಸಂಸ್ಥೆಯ ಮಹಾಪ್ರಬಂಧಕ ಶ್ರೀ ರವಿಚಂದ್ರ ರಾವ್ ಧನ್ಯವಾದ ನೀಡಿದರು.