ಕುಂದಾಪುರ: ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಕಂಬಳಕ್ಕೆ ಜಿಲ್ಲಾಡಳಿತ ನಿಷೆಧ ಹೇರಿದ್ದರಿಂದ ಶತಮಾನಗಳಿಂದ ಆಚರಿಸಿಕೊಂಡು ಬಂದ ಸಾಂಪ್ರದಾಯಿಕ
ಹರಕೆ ಕಂಬಳಗಳ ಉಡುಪಿ ಹಾಗೂ ಧ.ಕ. ಜಿಲ್ಲೆಗಳಲ್ಲಿ ಸ್ಥಗಿಉತಗೊಂಡಿದ್ದು ಈ ಬಗ್ಗೆ ಕಂಬಳ ನಡೆಸುವವರು ಹಾಗೂ ಕಂಬಳ ಪ್ರಿಯರು ಕಂಬಳ ನಿಲ್ಲಿಸಬಾರದೆಂದು ಪ್ರತಿಭಟನೆ ನಡೆಸಿದ್ದರು. ಈ ಬೆನ್ನಲ್ಲೇ ನ.೩೦ರಂದು ಭಾನುವಾರ ಯಡ್ತಾಡಿಯಲ್ಲಿ ಹಿಂಸೆರಹಿತವಾಗಿ, ಸಾಂಪ್ರದಾಯಿಕತೆಯೊಂದಿಗೆ ಜಿಲ್ಲೆಯಲ್ಲಿಯೇ ಮೊದಲ ಹರಿಕೆ ಕಂಬಳ ನಡೆಯಿತು.
ಹರಕೆಗಾಗಿ ಕಂಬಳ: ಹಲವು ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಬಾರ್ಕೂರು ಸಮೀಪದ ಯಡ್ತಾಡಿ ಕಂಬಳವನ್ನು ಆಯೋಜಿಸಿದ್ದ ಕಂಬಳ ಆಯೋಜಕರು ಕೋಣಗಳ ಓಟಕ್ಕೆ ಹೆಚ್ಚಿನ ಒತ್ತನ್ನುನೀಡುವದರ ಬದಲು ಪುರಾತನ ಸಂಪ್ರದಾಯಕ್ಕೆ ಒತ್ತು ನೀಡಿದರು. ಆಚರಣೆಯಂತೆ ಬೆಳಿಗ್ಗೆ ನಂದಿಕೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಅನಂತರ ಎರಡು ಜತೆ ಕೋಣ ಹಾಗೂ ಒಂದು ಜತೆ ಎತ್ತನ್ನು ಗದ್ದೆಗೆ ಇಳಿಸಲಾಯಿತು.ಅನಂತರ ಸಂಜೆ ದೀವಟಿಗೆಯ ಮೆರವಣಿಗೆಯೊಂದಿಗೆ ಕಂಬಳದ ಮನೆಯವರ ಕೋಣವನ್ನು ಗದ್ದೆಗಿಳಿಸಲಾಯಿತು. ಕಂಬಳದಲ್ಲಿ ಹರಿಕೆ ತೀರಿಸಲು ಬಂದ ಅನೇಕ ಮಂದಿ ಭಕ್ತರು ತಮ್ಮ ಕೋಣಗಳನ್ನು ಗದ್ದೆಯಲ್ಲಿ ಓಡಿಸದೆ, ಕೇವಲ ಗದ್ದೆಗಿಳಿಸುವುದರ ಮೂಲಕ ಹರಿಕೆ ತೀರಿಸಿದರು.
ಹೊಡೆಯದೇ ಓಡಿದ ಕೋಣಗಳು: ಕಂಬಳದಲ್ಲಿ ಕೋಣವನ್ನು ಓಡಿಸುವ ಓಟಗಾರ ಹಾಗೂ ಹಿಂಬಾಲಿಸುವ ಮೇಳಗಾರರಿರುವುದು ಸಾಮಾನ್ಯ. ಆದರೆ ಯಡ್ತಾಡಿಯಲ್ಲಿ ರವಿವಾರ ನಡೆದ ಕಂಬಳದಲ್ಲಿ ಹಲವು ಜೋಡಿ ಹಾಗೂ ಹಲವು ಒಂಟಿ ಕೋಣಗಳು ಎಕಾಂಗಿಯಾಗಿ ಓಡಿದ್ದು ವಿಶೇಷವಾಗಿತ್ತು. ಕೋಣಗಳನ್ನು ಸಿಂಗರಿಸಿ ಗದ್ದೆಯ ತುದಿಗೆ ತಂದು ಕೈಬಿಟ್ಟ ತತಕ್ಷಣ ಕೋಣಗಳೇ ಸ್ವಯಂ ಪ್ರೇರಣೆ ಎಂಬಂತೆ ಓಡುತ್ತಿದ್ದವು. ಈ ರೀತಿ ಹತ್ತಕ್ಕೂ ಹೆಚ್ಚು ಕೋಣಗಳ ಓಟ ನಡೆಯಿತು. ಈ ಸಂದರ್ಭ ಬಾರುಕೋಲು, ಗೋರಿ, ಓಟಕ್ಕೆ ಬಳಸುವ ಹಗ್ಗದ, ಹಲಗೆಯ ಬಳಕೆಯಾಗಲಿಲ್ಲ ಮತ್ತು ಕೋಣಗಳಿಗೆ ಯಾವುದೇ ಹಿಂಸೆ ನಡೆಯಲಿಲ್ಲ.
ಬ್ಯಾನರ್‌ನಲ್ಲಿ ಎಚ್ಚರಿಕೆ ಸಂದೇಶ: ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಉಡುಪಿ ಜಿಲ್ಲೆಯಲ್ಲಿ ಕಂಬಳ ಕ್ರೀಡೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ. ಆದರೆ ಯಡ್ತಾಡಿ ಕಂಬಳ ಧಾರ್ಮಿಕ, ಸಂಪ್ರದಾಯಿಕ ಹಾಗೂ ಐತಿಹಾಸಿಕ ಹಿನ್ನಲೆ ಹೊಂದಿದೆ. ನ್ಯಾಯಾಲಯ, ಜಿಲ್ಲಾಡಳಿತದ ಆದೇಶಕ್ಕೆ ತಲೆಬಾಗಿ ಅಹಿಂಸಾತ್ಮಕವಾಗಿ,ಸಾಂಕೇತಿಕವಾಗಿ ಕಂಬಳ ನಡೆಸಲಾಗುತ್ತಿದೆ. ಕೋಣಗಳ ಮಾಲಕರು ಕೋಣಗಳಿಗೆ ಹಿಂಸೆಯಾಗದಂತೆ ಎಚ್ಚರಿಕೆ ವಹಿಸಬೇಕು ಎನ್ನುವ ಬ್ಯಾನರನ್ನು ಕಂಬಳದ ಆಯೋಜಕರು ಸ್ಥಳದಲ್ಲಿ ಆಯೋಜಿಸಿದ್ದು ಕಂಬಳ ಯಾವುದೇ ಹಿಂಸೆಯಿಲ್ಲದೇ ಸಾಂಗವಾಗಿ ನಡೆಯಲು ಅನುಕೂಲಕರವಾಗಿತ್ತು.
ಜನಸಂಖ್ಯೆ ವಿರಳ: ದ.ಕ. ಮತ್ತು ಉಡುಪಿ ಜಿಲ್ಲೆಯ ಕಂಬಳ ವೀಕ್ಷಕರ ಪಾಲಿಗೆ ಕಂಬಳ ಎನ್ನುವುದು ಧಾರ್ಮಿಕ ನಂಬಿಕೆ, ಸಂಪ್ರದಾಯಿಕ ಕ್ರೀಡೆಯ ಜೊತೆಗೆ ಮನೋರಂಜೆನಯೂ ಆಗಿತ್ತು. ಕಂಬಳ ಮಹೋತ್ಸವದ ವೀಕ್ಷಣೆಗೆ ಬರುವ ಅದೇಷ್ಟೋ ಜನರು ಮನೋರಂಜನೆ ದೃಷ್ಟಿಯಿಂದಲೇ ಆಗಮಿಸುತ್ತಿದ್ದರು. ಅಲ್ಲದೇ ಕಂಬಳ ನಡೆಯುವ ಪ್ರದೇಶದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗುತ್ತಿರುವ ಕಾರಣದಿಂದಾಗಿ ಹಳ್ಳಿ ಜನರ ಪಾಲಿಗೆ ಕಂಬಳ ಮಹೋತ್ಸವವೆನ್ನುವುದು ತಮ್ಮ ನಿತ್ಯದ ಜಂಜಾಟವನ್ನು ಮರೆಯುವ ಒಂದು ದಿನದ ಜಾತ್ರೆಯಾಗಿತ್ತು. ಭಾನುವಾರ ನಡೆದ ಕಂಬಳದಲ್ಲಿ ಮಾತ್ರ ಕಂಬಳ ವೀಕ್ಷಣೆಗೆ ಬೆರಣೆಣಿಕೆಯ ಜನರು ಮಾತ್ರವೇ ನೆರೆದಿದ್ದರು. ಕಂಬಳ ನಿಷೆಧ ಆದೇಶದಿಂದ ಕೋಣಗಳ ಓಟಕ್ಕೆ ಪ್ರಾಧಾನ್ಯತೆಯಿಲ್ಲ ಎಂಬ ನೆಲೆಯಲ್ಲಿ ಕಂಬಳದಲ್ಲಿ ಜನಸಂಖ್ಯೆ ತೀರ ವಿರಳವಾಗಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಕೋಣಗಳಿಗೆ ಹೊಡೆದು ಓಡಿಸುತ್ತಾರೆಂಬ ಆರೋಪದ ನಡುವೆ, ಜಿಲ್ಲಾಡಳಿತದ ಕಂಬಳ ನಿಷೇಧದ ನಡುವೆ ಇನ್ನು ಮುಂದೆ ಹೇಗೆ ಕಂಬಳ ಆಯೋಜಿಸುವುದು ಎನ್ನುವ ಚಿಂತೆಯಲ್ಲಿರುವವರಿಗೆ, ಯಾವುದೇ ಹಿಂಸೆಯಿಲ್ಲದೆ, ಕೋಣಗಳ ಓಟಕ್ಕೂ ದಕ್ಕೆಬಾರದ ರೀತಿಯಲ್ಲಿ ಅಹಿಂಸಾತ್ಮಕವಾಗಿ ಹರಕೆ ಹಾಗೂ ಸಂಪ್ರಾದಾಯಿಕ ರೀತಿಯಲ್ಲಿ ಯಡ್ತಾಡಿ ಕಂಬಳ ಆಯೋಜನೆಗೊಂಡಿದ್ದು ಇದು ಮುಂದಿನ ದಿನಗಳಲ್ಲಿ ಎಲ್ಲರಿಗೂ ಮಾದರಿಯಾಗುವಂತಿದೆ.