ಮಂಗಳೂರು ಡಿ.1: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ ಅಕ್ರಮ ಚಿನ್ನ ಸಾಗಾಟದ ಆರೋಪದಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 52.9 ಲಕ್ಷ ರೂ. ವೌಲ್ಯದ 2 ಕೆ.ಜಿ. ಯ ಚಿನ್ನದ ಬಾರ್‌ಗಳನ್ನು ವಶಪಡಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.
ಕೇರಳ ಮಡವೂರು ನಿವಾಸಿ ಅಬ್ದುಲ್ ಮುನಾಫ್ ಅಕೋತ್ (26), ದಕ್ಷಿಣ ಕೇರಳದ ರಿತೇಶ್ ಮತ್ತು ಬಿ.ಎಸ್. ನಿಜೇಶ್‌ರಾಜ್ ಬಂಧಿತ ಆರೋಪಿಗಳು. ಮೊಬೈಲ್ ಇಡುವ ಪೌಚ್‌ನಲ್ಲಿ ತಂದಿದ್ದರೆನ್ನಲಾದ ಚಿನ್ನವನ್ನು ಅಬ್ದುಲ್ ಮುನಾಫ್‌ರ ಬಳಿಯಿಂದ ವಶಪಡಿಸಿ ಕೊಳ್ಳಲಾಗಿದ್ದು, ತಲಾ ಒಂದು ಕೆ.ಜಿ.ಯ ಎರಡು ಬಾರ್‌ಗಳು ಪತ್ತೆಯಾಗಿವೆ. ಇವನ್ನು ದುಬೈಯ ಕಸ್ಟಮ್ ಫ್ರೀ ಬ್ಯಾಗ್‌ನಲ್ಲಿ ತರಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬ್ಯಾಗ್ ಮತ್ತು ಚಿನ್ನವನ್ನು ಮುನಾಫ್‌ಗೆ ರಿತೇಶ್, ನಿಜೇಶ್ ಕೊಟ್ಟಿದ್ದರು ಎಂದು ಹೇಳಲಾಗಿದ್ದು, ಚಿನ್ನ ಅಕ್ರಮ ಸಾಗಾಟಕ್ಕೆ ಸಹ ಕರಿಸಿದ ಆರೋಪದಲ್ಲಿ ರಿತೇಶ್ ಮತ್ತು ನಿಜೇಶ್‌ರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.