ಪಣಜಿ,ಡಿ.01 : ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಸಿಪಿಐ(ಎಂ)ವರಿಷ್ಠ ಸೀತಾರಾಮ್ ಯಚೂರಿ, ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇನ್ನೂ ಮಧುಚಂದ್ರದ ಅವಧಿಯಲ್ಲಿಯೇ ಇದೆ ಎಂದು ಕುಹಕವಾಡಿದ್ದಾರೆ. ಗೋವಾದ ರಾಜಧಾನಿ ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಮ್ಯೂನಿಸ್ಟ್ ನಾಯಕ, “ಎನ್‌ಡಿಎ ಸರ್ಕಾರ ಇನ್ನೂ ಹನಿಮೂನ್ ಹಂತದಲ್ಲಿಯೇ ಇದೆ. ಲೋಕಸಭಾ ಚುನಾವಣೆಯ ವೇಳೆ ಜನರಿಗೆ ನೀಡಿದ್ದ ಭರವಸೆಗಳಿಗೆ ಸಾಕಾರ ರೂಪ ಕೊಡಲು ಸರಕಾರ ವಿಫಲವಾಗಿದೆ. ಅವರ ಈ ಆಡಳಿತದ ವೈಫಲ್ಯಕ್ಕೆ ಜನರು ಶೀಘ್ರದಲ್ಲಿಯೇ ಪ್ರತಿಕ್ರಿಯಿಸಲಿದ್ದಾರೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದಿನ ಯುಪಿಎ ಸರ್ಕಾರಕ್ಕೂ ಮತ್ತು ಬಿಜೆಪಿ ನೇತೃತ್ವದ ಈಗಿನ ಸರ್ಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದಿರುವ ಯಚೂರಿ . “ಮೋದಿಯವರು ಮಾಜಿ ಪ್ರಧಾನಿಯನ್ನು ‘ಮೌನ್’ ಮೋಹನ್ ಸಿಂಗ್ ಎಂದು ಟೀಕಿಸುತ್ತಿದ್ದರು. ಆದರೆ, ಈಗಿನ ಪ್ರಧಾನಿ ಹೆಚ್ಚಿನ ಸಂದರ್ಭದಲ್ಲಿ ವಿದೇಶದಲ್ಲಿ ಮಾತನಾಡುತ್ತಿರುವುದಷ್ಟೇ ಕಂಡುಬರುತ್ತದೆ ” ಎಂದು ಪರಿಹಾಸ್ಯ ಮಾಡಿದ್ದಾರೆ.
ಬಿಜೆಪಿಯ ಅಚ್ಚೇ ದಿನ್ ಘೋಷಣೆ ಕೇವಲ ಚುನಾವಣಾ ಗಿಮಿಕ್ ಎಂದು ಅವರು ಆರೋಪಿಸಿದ್ದಾರೆ. “ಅಂತಾರಾಷ್ಟ್ರೀಯ ತೈಲ ಬೆಲೆಗಳು ಅರ್ಧಕರ್ಧದಷ್ಟು ಇಳಿಕೆಯಾಗಿವೆ. ಆದರೆ, ಭಾರತೀಯರಿಗೆ ಅದರ ಲಾಭ ಶೇ.10ರಿಂದ 20ರಷ್ಟೇ ಸಿಕ್ಕುತ್ತಿದೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳಿಗೆ ಸಹಾಯ ಮಾಡುವುದರಲ್ಲಿಯೇ ವ್ಯಸ್ತವಾಗಿದೆ. ಯಾಕೆಂದರೆ ಲೋಕಸಭಾ ಚುನಾವಣೆಯ ವೇಳೆ ಇವರು ಪಕ್ಷಕ್ಕೆ ಹಣದ ಸಹಾಯ ಮಾಡುತ್ತಾರೆ” ಎಂದು ಸೀತಾರಾಮ್ ಯಚೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.