ಮಂಗಳೂರು, ಡಿ.1: ಇತ್ತೀಚಿನ ದಿನಗಳಲ್ಲಿ ಅನಧಿಕೃತ ಖಾಸಗಿ ಹಣಕಾಸು ಕಂಪೆನಿಗಳು ಕಾನೂನುಬಾಹಿರ ವ್ಯವಹಾರಗಳಿಗೆ ಮೋಸ ಹೋಗುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಖಾಸಗಿ ಹಣಕಾಸು ಕಂಪೆನಿಗಳೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಕರೆ ನೀಡಿದ್ದಾರೆ.
ಅವರು ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಅನಧಿಕೃತ ಖಾಸಗಿ ಹಣಕಾಸು ಕಂಪೆನಿಗಳ ಕಾನೂನು ಬಾಹಿರ ವ್ಯವಹಾರ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಲವು ಖಾಸಗಿ ಹಣಕಸು ಕಂಪೆನಿಗಳು ಏಜೆಂಟರನ್ನು ನೇಮಿಸಿ, ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ಬಳಿಕ ಮುಚ್ಚಿ ಹೋಗುವ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕರ ಹಣಕ್ಕೆ ಪಂಗನಾಮ ಹಾಕುವುದಲ್ಲದೆ, ಏಜೆಂಟರೂ ಅನೇಕ ಕಷ್ಟಗಳಿಗೆ ಸಿಲುಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂತಹ ಹಣಕಾಸು ಸಂಸ್ಥೆಗಳ ದಾಖಲೆಗಳನ್ನು ಪರಿಶೀಲಿಸಿ, ಸಮೀಪದ ಬ್ಯಾಂಕುಗಳಲ್ಲಿ ಅಥವಾ ಸಹಕಾರ ಸಂಘಗಳ ಇಲಾಖೆಯಲ್ಲಿ ಅವುಗಳನ್ನು ಪರಿಶೀಲಿಸಬೇಕು ಎಂದು ಅವರು ಹೇಳಿದರು.
ಯಾವುದೇ ಬ್ಯಾಂಕುಗಳು ಎಂತಹ ಠೇವಣಿಗಳಿಗೂ ಸುಮಾರು ಶೇ.11 ಕ್ಕಿಂತ ಹೆಚ್ಚು ಬಡ್ಡಿ ವಿಧಿಸುವುದಿಲ್ಲ. ಹೀಗಾಗಿ ಇದಕ್ಕಿಂತ ಹೆಚ್ಚು ಬಡ್ಡಿಯನ್ನು ತೋರಿಸುವ ಹಣಕಾಸು ಸಂಸ್ಥೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಈಗಾಗಲೇ ಜಿಲ್ಲೆಯಲ್ಲಿ ಇಂತಹ ವ್ಯವಹಾರಗಳಿಂದ ಮೋಸ ಹೋಗಿರುವ ಅನೇಕ ಪ್ರಕರಣಗಳಿದ್ದು, ಎಲ್ಲರೂ ಸಮೀಪದ ಪೊಲೀಸ್ ಠಾಣೆಗಳಲ್ಲಿ ದೂರು ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಯಾವುದೇ ರೀತಿಯಲ್ಲಿ ಸತಾಯಿಸದೆ ದೂರು ಬಂದ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಖಾಸಗಿ ಹಣಕಾಸು ಕಂಪೆನಿಗಳಿಗೆ ಲೈಸನ್ಸ್ ನೀಡುವಾಗ ಸಾಕಷ್ಟು ದಾಖಲೆಗಳನ್ನು ಮತ್ತು ಅವರ ಅರ್ಹತೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕವಷ್ಟೇ ಅನುಮತಿ ನೀಡುವಂತೆ ಅವರು ಮನಪಾ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಹಕಾರ ಸಂಘಗಳ ಜಿಲ್ಲಾ ರಿಜಿಸ್ಟ್ರಾರ್ ಬಿ.ಕೆ. ಸಲೀಂ, ಲೀಡ್ ಬ್ಯಾಂಕ್ ಮೆನೇಜರ್ ಅಮರನಾಥ ಹೆಗ್ಡೆ, ವಿವಿಧ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಉಪಸ್ಥಿತರದ್ದರು.