ಕನ್ನಡ ವಾರ್ತೆಗಳು

ವಂಡ್ಸೆ : ಕೃಷಿಕನ ಮೇಲೆ ತಲವಾರು ದಾಳಿ ನಡೆಸಿ ಕೊಲೆಯತ್ನ – ಆರೋಪಿಗಳ ಬಂಧನಕ್ಕೆ ಬಲೆ

Pinterest LinkedIn Tumblr

attempt_Murder_Kollur

ಕುಂದಾಪುರ: ವಂಡ್ಸೆ ಪೇಟೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಎರಡು ಬೈಕುಗಳಲ್ಲಿ ಬಂದ ನಾಲ್ವರ ತಂಡವೊಂದು ಮಾರಕಾಯುಧಗಳಿಂದ ಮಾರಣಾಂತಿಕವಾಗಿ ತೀವ್ರ ಹಲ್ಲೆ ನಡೆಸಿದ ಘಟನೆ ಸೋಮವಾರ ರಾತ್ರಿ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ನೂಜಾಡಿ ಕ್ರಾಸ್ ಸಮೀಪ ನಡೆದಿದೆ.

ತಂಡದಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ತೆಂಕೊಡ್ಗಿ ನಿವಾಸಿ ಆನಂದ ಶೆಟ್ಟಿ ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಹಲ್ಲೆಗೀಡಾದವರ ಹೇಳಿಕೆಯಂತೆ ಆರೋಪಿಗಳಲ್ಲಿ ಇಬ್ಬರನ್ನು ಸ್ಥಳೀಯ ನಿವಾಸಿಗಳಾದ ಮಹೇಶ್ ಗಾಣಿಗ ಹಾಗೂ ಮಂಜುನಾಥ ಯಾನೇ ಸಿಡಿ ಮಂಜ ಎಂದು ಗುರುತಿಸಲಾಗಿದ್ದು, ಮತ್ತಿಬ್ಬರ ಗುರುತು ಪತ್ತೆಯಾಗಿಲ್ಲ.

ಘಟನೆಯ ವಿವರ: ಆರೋಪಿಗಳಲ್ಲೊಬ್ಬನಾದ ಮಹೇಶ್ ಗಾಣಿಗ ಎಂಬಾತ ಅಕ್ಕಿ ಕದ್ದು ಮಾರಾಟ ಮಾಡುತ್ತಿದ್ದಾನೆ ಎಂಬುದಾಗಿ ಈ ಹಿಂದೆ ಹಲ್ಲೆಗೀಡಾದ ಆನಂದ ಶೆಟ್ಟಿ ಎನ್ನುವವರು ಬೇರೆಯವರ ಹತ್ತಿರ ಹೇಳಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಆಕ್ರೋಶಗೊಂಡ ಮಹೇಶ್ ಗಾಣಿಗ ತನ್ನ ಸ್ನೇಹಿತರಾದ ಸಿಡಿ ಮಂಜ ಹಾಗೂ ಮತ್ತಿಬ್ಬರ ಜೊತೆ ಸೇರಿ ನೇರವಾಗಿ ದಾಳಿ ನಡೆಸಲು ಸಂಚು ರೂಪಿಸಿದ್ದು ಭಾನುವಾರ ಆನಂದ ಶೆಟ್ಟಿಗೆ ಈ ಬಗ್ಗೆ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದಾನೆನ್ನಲಾಗಿದೆ.

ಸೋಮವಾರ ರಾತ್ರಿ ಸುಮಾರು 9.15 ರ ವೇಳೆಗೆ ಆನಂದ ಶೆಟ್ಟಿ ಮನೆಗೆ ನಡೆದುಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಆರೋಪಿಗಳು ಬೈಕಿನಲ್ಲಿ ಹೋಗಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದು, ಮರದ ಸೋಟೆಯಿಮದ ಆನಂದ ಶೆಟ್ಟಿಯ ತಲೆಗೆ ಹೊಡೆದಿದ್ದಾರೆ. ಜೊತೆಗಿದ್ದ ಸಿ.ಡಿ.ಮಂಜ ತಲವಾರಿನಿಂದ ಹಲ್ಲೆ ನಡೆಸಿದ್ದು, ಆನಂದ ಶೆಟ್ಟಿಯ ತಲೆಗೆ, ಎಡಕಿವಿಗೆ ಹಾಗೂ ಎಡಗಲ್ಲಕ್ಕೆ ಕಡಿದಿದ್ದಾನೆ ಎಂದು ಆನಂದ ಶೆಟ್ಟಿ ಆಸ್ಪತ್ರೆಯಲ್ಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Write A Comment