ಮಂಗಳೂರು, ಡಿ.03 : ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗ ಗಳ ಉದ್ಘಾಟನಾ ಸಮಾರಂಭ ಡಿ.5ರಂದು ಅಪರಾಹ್ನ 2 ಗಂಟೆಗೆ ನಡೆಯಲಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ವಿವಿಧ ವಿಷಯ ಗಳ ಕುರಿತಂತೆ ಸಭೆಯ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. 1.12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಲತ್ಯಾಜ್ಯ ಸಂಸ್ಕರಣಾ ಘಟಕ, 20 ಲಕ್ಷ 30 ಸಾವಿರ ರೂ. ವೆಚ್ಚದ ಸುಸಜ್ಜಿತ ಶವಾಗಾರ, 15 ಲಕ್ಷ ರೂ. ವೆಚ್ಚದ ತುರ್ತು ಚಿಕಿತ್ಸಾ ವಿಭಾಗ, 47 ಲಕ್ಷ ರೂ. ವೆಚ್ಚದ ಕ್ಷ ಕಿರಣ ವಿಭಾಗ, 10 ಲಕ್ಷ ರೂ. ವೆಚ್ಚದ ಡಾಟ್ ಪ್ಲಸ್ ವಿಭಾಗ, ದಂತ ಚಿಕಿತ್ಸಾ ವಿಭಾಗದ ವಿವಿಧ ಉಪ ವಿಭಾಗಗಳು ಹಾಗೂ ಕ್ಯೂರ್ ಇಂಟರ್‌ನ್ಯಾಷನಲ್ ಇಂಡಿಯಾ ಟ್ರಸ್ಟ್ ಸಭಾಗಿತ್ವದ ಕ್ಲಬ್ ಫೂಟ್ ಕೇರ್ ಸೆಂಟರ್ ಅಂದು ಉದ್ಘಾಟನೆಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟನೆ ನೆರವೇರಿಸಲಿದ್ದು, ಸಚಿವ ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.
ಡಾಟ್ ಪ್ಲಸ್ ವಿಭಾಗ: ಕ್ಷಯ ರೋಗಿಗಳಿಗೆ ನೇರ ನಿಗಾವಣಾ ಅಲ್ಪಾವಧಿ ಚಿಕಿತ್ಸೆ ಒದಗಿಸುವ ಕೇಂದ್ರ ಇದಾ ಗಿದ್ದು, 10 ಲಕ್ಷ ರೂ. ವೆಚ್ಚದಲ್ಲಿ ಹಳೆಯ ಕಟ್ಟಡವನ್ನು ನವೀಕರಿಸಲಾಗಿದೆ. ಈ ಕೇಂದ್ರ ಇದೀಗ ಇಬ್ಬರು ರೋಗಿ ಗಳನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ಒದಗಿಸುವ ಕಾರ್ಯ ನಡೆಸುತ್ತಿದೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ರಾವ್ ತಿಳಿಸಿದರು. ಕ್ಷಯ ರೋಗಿಯ ಗಂಭೀರತೆಯನ್ನು ಅನುಸರಿಸಿ ರೋಗಿ ಯನ್ನು ಈ ಕೇಂದ್ರದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಕೇಂದ್ರದಲ್ಲಿ ಏಕಕಾಲದಲ್ಲಿ ನಾಲ್ವರು ಪುರುಷ ಹಾಗೂ ಇಬ್ಬರು ಮಹಿಳಾ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯಲು ಅವಕಾಶವಿದೆ. ಕ್ಷಯರೋಗ ಶೇ.100ರಷ್ಟು ಗುಣಪಡಿಸಬಹುದಾದ ರೋಗವಾಗಿದ್ದು, ಆರಂಭಿಕ ಹಂತದಲ್ಲೇ ಚಿಕಿತ್ಸೆ ಒದಗಿಸುವುದು ಅಗತ್ಯವಾಗಿರುತ್ತದೆ. ಎರಡು ವಾರಕ್ಕಿಂತಲೂ ಹೆಚ್ಚಿನ ಸಮಯ ಕೆಮ್ಮು ಇದ್ದಲ್ಲಿ ತಕ್ಷಣ ಸಮೀಪದ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಡಾ.ರಾಮಕೃಷ್ಣ ಹೇಳಿದರು. ಈ ಸಂದರ್ಭ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿದೇವಿ ಎಚ್.ಆರ್. ಉಪಸ್ಥಿತರಿದ್ದರು.
ವೆನ್ಲಾಕ್ ಶವಾಗಾರ ರಾಜ್ಯಕ್ಕೆ ಮಾದರಿ : ವೆನ್ಲಾಕ್ ಆಸ್ಪತ್ರೆಯ ಶವಾಗಾರವನ್ನು ರಾಜ್ಯಕ್ಕೆ ಮಾದರಿಯಾಗಿ ನವೀಕರಣಗೊಳಿಸಲಾಗಿದ್ದು, ರಾಜ್ಯದಲ್ಲೇ ಅತ್ಯಂತ ಸುಸಜ್ಜಿತವಾದ ಶವಾಗಾರ ಇದಾಗಿದೆ. ಸುಮಾರು 20.30 ಲಕ್ಷ ರೂ. ವೆಚ್ಚ ದಲ್ಲಿ ನಿರ್ಮಿಸಲಾಗಿರುವ ಈ ಶವಾಗಾರದಲ್ಲಿ ಮೃತದೇಹಗಳೊಂದಿಗೆ ಬರುವ ಸಂಬಂಧಿಕರಿಗೆ ವಿಶ್ರಾಂತಿಯ ಸ್ಥಳ, ಕುಡಿಯುವ ನೀರಿನ ವ್ಯವಸ್ಥೆ, ರಾತ್ರಿ ಹೊತ್ತು ಎಲ್‌ಇಡಿ ವಿದ್ಯುದ್ದೀಪದ ವ್ಯವಸ್ಥೆ ಯನ್ನು ಕಲ್ಪಿಸಲಾಗಿದೆ. ಆಪ್ತರ ಅಗಲುವಿಕೆಯ ನೋವಿನಲ್ಲಿರುವ ಕುಟುಂಬಸ್ಥರಿಗೆ ಮಾನಸಿಕ ನೆಮ್ಮದಿ ನೀಡುವಂತಹ ವಾತಾವರಣವನ್ನು ಉಂಟು ಮಾಡುವ ರಾಜ್ಯಕ್ಕೆ ಮಾದರಿಯಾದ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಜನೌಷಧಿ, ಜನ ಸಂಜೀವಿನಿಗೆ ಸಿದ್ಧತೆ:ದ.ಕ. ಜಿಲ್ಲೆಯ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಜನಸಂಜೀವಿನಿ ಹಾಗೂ ಜನೌಷಧಿ ಕೇಂದ್ರವನ್ನು ಸ್ಥಾಪಿಸುವ ಕಾರ್ಯಕ್ಕೆ ಸಿದ್ಧತೆಗಳು ನಡೆಯುತ್ತಿದೆ ಎಂದು ಸಚಿವ ಖಾದರ್ ಈ ಸಂದರ್ಭ ತಿಳಿಸಿದರು. ಜನ ಸಂಜೀವಿನಿ ಕೇಂದ್ರದಲ್ಲಿ ಡಯಾಗ್ನಿಸ್ಟಿಕ್ ಸೆಂಟರ್, ಎಂಆರ್‌ಐ, ಸಿಟಿಸ್ಕಾನ್, ಹೈಟೆಕ್ನಾಲಜಿ ಪೆಥಾಲಜಿ ಮೊದಲಾದ ಸೌಲಭ್ಯಗಳು ಜಿಲ್ಲಾ ಆಸ್ಪತ್ರೆಯ ಪಕ್ಕದಲ್ಲೇ ಒಂದೇ ಸೂರಿನಡಿ ಲಭ್ಯ ವಾಗಲಿದೆ. ಈ ಎಲ್ಲಾ ರೀತಿಯ ಚಿಕಿತ್ಸಾ ಸೌಲಭ್ಯಗಳ ದರವು ಹೊರಗಿನ ದರಕ್ಕಿಂತ ಅರ್ಧಕ್ಕರ್ಧ ಕಡಿತದ ದರದಲ್ಲಿ ಆರೋಗ್ಯ ಇಲಾಖೆಯಿಂದಲೇ ನಿಗದಿಯಾಗಲಿದೆ.