ಮಂಗಳೂರು: ಸಿಸಿಬಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಮೂಡಬಿದ್ರಿ ಬಸ್‍ಸ್ಟಾಂಡ್ ಬಳಿ ಮಾರುತಿ ಒಮ್ನಿ ಕಾರಿನಲ್ಲಿ ಅಕ್ರಮವಾಗಿ ಜಿಂಕೆಯ ಕೊಂಬುಗಳನ್ನು ಸಾಗಿಸಿ ಮಾರಾಟ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ. ಬಂಧಿತರನ್ನು ಪುತ್ತಿಗೆ ಪದವು ಸಂಪಿಗೆಯ ಮಹಮ್ಮದ್ ವಸ್ಸೀರ್(22), ಬೆಂಗಳೂರಿನ ಫಿರೋಜ್ ಖಾನ್(30), ದಾವಣಗೆರೆ ಜಿಲ್ಲೆಯ ಗಿರೀಶ್ (23) ಎಂದು ಗುರುತಿಸಲಾಗಿದೆ.
ಬಂಧಿತರು ದಾವಣಗೆರೆಯ ಉಬ್ರಾಣಿ ಎಂಬಲ್ಲಿಂದ ಜಿಂಕೆಯ ಕೊಂಬುಗಳನ್ನು ತಂದು ಇಲ್ಲಿ ಮಾರಾಟ ಮಾಡಲು ಗಿರಾಕಿಗಳಿಗಾಗಿ ತಡಕಾಡುತ್ತಿರುವುದರ ಖಚಿತ ಮಾಹಿತಿ ಆಧರಿಸಿ ಬೆನ್ನುಬಿದ್ದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 4 ಜೊತೆ ಜಿಂಕೆ ಕೊಂಬುಗಳು, ಒಂದು ಮಾರುತಿ ಒಮ್ನಿ ಕಾರು, 4 ಮೊಬೈಲ್ ಫೋನ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಮೊತ್ತ ಐದು ಲಕ್ಷ ಎಂದು ಅಂದಾಜಿಸಲಾಗಿದೆ.
ಆರೋಪಿಗಳನ್ನು ತನಿಖೆಗಾಗಿ ಮೂಡಬಿದ್ರಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಪೊಲೀಸ್ ಆಯುಕ್ತರಾದ ಆರ್.ಹಿತೇಂದ್ರರವರ ನಿರ್ದೇಶನದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪಆಯುಕ್ತರಾದ ಡಾ.ಕೆ.ವಿ.ಜಗದೀಶ್ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಪೊಲೀಸ್ ಉಪಆಯುಕ್ತ ವಿಷ್ಣುವರ್ಧನ.ಎನ್ ರವರ ಮಾಗದರ್ಶನದಂತೆ, ಮಂಗಳೂರು ಸಿಸಿಬಿ ಘಟಕದ ಇನ್ಸ್‍ಪೆಕ್ಟರ್ ವೆಲೆಂಟೈನ್ ಡಿ’ಸೋಜ ಹಾಗೂ ಪಿಎಸ್‍ಐ ಶ್ಯಾಮ್‍ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಗಾಂಜಾ ವ್ಯಾಪಾರಿ ಬಂಧನ :
ಸಿಸಿಬಿ ಪೊಲೀಸರು ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ ಗಾಂಜಾ ಅಲೆಮಾರಿ ವ್ಯಾಪಾರಿಯೊಬ್ಬರನ್ನು ನಗರದ ಮಹಾವೀರ (ಪಂಪ್‌ವೆಲ್) ವೃತ್ತದ ಸಮೀಪ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು ರೂ10,000 ಮೌಲ್ಯದ 500 ಗ್ರಾಂ ಗಾಂಜಾ ಮತ್ತು ಎರಡು ಮೊಬೈಲ್ ಫೋನ್‌ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂದಿತನನ್ನು ಜೆಪ್ಪಿನಮೊಗರು ನಿವಾಸಿ ಉಮೇಶ್ (33 ) ಎಂದು ಗುರುತಿಸಲಾಗಿದೆ.
ಪೊಲೀಸರ ವಿಚಾರಣೆ ಸಮಯದಲ್ಲಿ, ಆರೋಪಿ ಉಮೇಶ್ ತಾನು ರಹಸ್ಯವಾಗಿ ಜೈಲಿನಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಎಂಬ ವಿಷಯ ತಿಳಿಸಿದ್ದಾನೆ.