ಮಂಗಳೂರು: ನಗರದ ಬಿಜೈ ಆನೆಗುಂಡಿ ರಸ್ತೆಯಲ್ಲಿರುವ ಭಾರತೀ ಬಿಲ್ಡರ್ಸ್ ಡೆವಲಪರ್ಸ್ ಕಚೇರಿಯಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟನೆ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಸತಾರಾ ಜಿಲ್ಲೆಯ ಠೇಲ್ ತಾಲೂಕಿನ ನಾಗತಾಠೆ ನಿವಾಸಿ ಅಝ್ಮಿರ್ ಅಕ್ಬರ್ ಮುಲ್ಲಾ (23) ಬಂಧಿತ ಆರೋಪಿ. ಆರೋಪಿಗಳಿಗೆ ಪಿಸ್ತೂಲ್ ನೀಡಿದ ಅರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.
ರವಿ ಪೂಜಾರಿ ಸಹಚರರು 2014ರ ಮಾ.10ರಂದು ಭಾರತೀ ಬಿಲ್ಡರ್ಸ್ ಡೆವಲಪರ್ಸ್ ಕಚೇರಿಗೆ ಇಬ್ಬರು ಅಪರಿಚಿತರು ನುಗ್ಗಿ ಹಫ್ತಾಕ್ಕಾಗಿ ಬೆದರಿಕೆ ಒಡ್ಡಿ ಶೂಟೌಟ್ ಮಾಡಿದ್ದರು. ಈ ಪ್ರಕರಣದಲ್ಲಿ ಪಿಸ್ತೂಲ್ ನೀಡಿದ್ದ ಆರೋಪಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಉರ್ವ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ ಅಝ್ಮಿರ್ ಅಕ್ಬರ್ ಮುಲ್ಲಾನನ್ನು ಬಂಧಿಸಲಾಗಿದೆ.
ಮಾ.10ರಂದು ಭಾರತೀ ಬಿಲ್ಡರ್ಸ್ ಡೆವಲಪರ್ಸ್ ಕಚೇರಿಗೆ ಬಂದ ಅಪರಿಚಿತ, ಸಂಸ್ಥೆಯ ಮಾಲಕ ಲೋಕನಾಥ್ ಶೆಟ್ಟ ಎಂಬವರನ್ನು ಕೇಳಿ, ಅವರು ಕಚೇರಿಯಲ್ಲಿ ಇಲ್ಲದೇ ಇದ್ದ ಕಾರಣ, ಸಂಸ್ಥೆಯ ಸುಪರ್‌ವೈಸರ್ ಜಾನ್ ಪ್ಯಾಟ್ರಿಕ್‌ರಿಗೆ ಪಿಸ್ತೂಲ್ ತೋರಿಸಿ ಶೂಟ್ ಮಾಡಲು ಯತ್ನಿಸಿದ್ದ. ಮಿಸ್ ಫೈಯರ್ ಆಗಿದ್ದರಿಂದ ಜಾನ್ ಪ್ಯಾಟ್ರಿಕ್‌ರಿಗೆ ಬೆದರಿಕೆ ಹಾಕಿ ಮೋಟಾರು ಸೈಕಲ್‌ನಲ್ಲಿ ಪರಾರಿಯಾಗಿದ್ದ. ಈ ಬಗ್ಗೆ ಮಂಗಳೂರು ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಲೋಕನಾಥ್ ಶೆಟ್ಟಿ ಅವರಿಂದ ಹಫ್ತಾ ವಸೂಲಿ ಮಾಡುವ ಉದ್ದೇಶದಿಂದ ಭೂಗತ ಪಾತಕಿ ರವಿ ಪೂಜಾರಿಯು ಆತನ ಸಹಚರರೊಂದಿಗೆ ಸೇರಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತನಿಖೆಯಿಂದ ಮಾಹಿತಿ ಪಡೆದುಕೊಂಡಿದ್ದರು. ಈ ಪ್ರಕರಣದಲ್ಲಿ ಸಂಘಟಿತ ಅಪರಾಧ ನಡೆದಿರುವುದು ಕಂಡು ಬಂದಿದ್ದುದರಿಂದ ಕೋಕಾ ಕಾಯ್ದೆಯನ್ನು ಅಳವಡಿಸಿ ತನಿಖೆ ಮುಂದುವರೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ರವಿಪೂಜಾರಿಯ ಸಹಚರರು ಎನ್ನಲಾದ 7 ಮಂದಿಯನ್ನು ಈಗಾಗಲೇ ಬಂಧಿಸಿದ್ದಾರೆ.