ಮಂಗಳೂರು,ಡಿ.06: ನಗರದ ಹೊರವಲಯದ ಗುರುಪುರ ಸಮೀಪದ ಉಳಾಯಿಬೆಟ್ಟು ಎಂಬಲ್ಲಿ ಶುಕ್ರವಾರ (ಡಿ 5) ತಡರಾತ್ರಿ ಯುವಕರ ತಂಡವೊಂದು ದತ್ತಪೀಠ ಮಾಲಾಧಾರಿಗಳು ಸಂಚರಿಸುತ್ತಿದ್ದ ವಾಹನಕ್ಕೆ ಕಲ್ಲೆಸೆದ ಘಟನೆ ವರದಿಯಾಗಿದೆ.
ಇದರ ಪರಿಣಾಮ ಗಲಭೆ ಸೃಷ್ಟಿಯಾಗಿ ಇತ್ತಂಡಗಳ ಮಧ್ಯೆ ಮಾರಾಮಾರಿ ನಡೆದು ಘರ್ಷಣೆಯ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಮುಂದುವರಿದ ಭಾಗವೆಂಬಂತೆ ತಂಡವೊಂದು ಸ್ಥಳೀಯ ಕೆಲವು ಮನೆಗಳ ಮೇಲೂ ದಾಳಿ ನಡೆಸಿದ್ದಾರೆ. ಇದಲ್ಲದೇ, ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದ ಆರೋಪ ಕೂಡಾ ಕೇಳಿಬಂದಿದೆ. ಕಲ್ಲು ತೂರಾಟದಿಂದ ಹಲ್ಲೆಗೊಳಗಾದವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಳಾಯಿಬೆಟ್ಟು ಎಂಬಲ್ಲಿ ಶುಕ್ರವಾರ ರಾತ್ರಿ ದತ್ತಪೀಠ ಮಾಲಾಧಾರಿಗಳು ಮಿನಿ ಬಸ್ ನಲ್ಲಿ ಸಂಚರಿಸುತ್ತಿದ್ದಾಗ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಬಸ್ಸಿನಲ್ಲಿದ್ದ ಮಾಲಾಧಾರಿಗಳು ಬಸ್ ನಿಲ್ಲಿಸಿ ಕಿಡಿಗೇಡಿಗಳ ಮೇಲೆ ತಿರುಗಿ ಕಲ್ಲು ತೂರಾಟ ನಡೆಸಿದ್ದಾರೆ. ಇದು ಕೆಲವು ವಾಹನಗಳು ಮತ್ತು ಪಕ್ಕದಲ್ಲಿದ್ದ ಮಸೀದಿಯ ಗಾಜಿಗೂ ಬಿದ್ದಿದೆ. ಅಷ್ಟರಲ್ಲಿ ವಾಮಂಜೂರು ಜಂಕ್ಷನ್ ಸಮೀಪ ಗುಂಪು ಸೇರಿದ ಒಂದು ಕೋಮಿನ ಸುಮಾರು 200ಕ್ಕೂ ಹೆಚ್ಚು ಯುವಕರು ಕೆಲವು ಬೈಕ್, ರಿಕ್ಷಾಗಳನ್ನು ಪುಡಿಗಟ್ಟಿದರಲ್ಲದೆ ಕೆಲವು ಮನೆಗಳ ಮೇಲೂ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಮಹಿಳೆಯರು, ಯುವತಿಯರು ಸೇರಿದಂತೆ ಎಂಟು ಮಂದಿಯನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಲು ಶುಕ್ರವಾರ ರಾತ್ರಿಯೇ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ವೆನ್ ಲಾಕ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಘಟನೆ ವರದಿಯಾಗುತ್ತಿದ್ದಂತೆಯೇ ಕಂಕನಾಡಿ ಠಾಣಾ ಪೊಲೀಸರು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ವಾಮಂಜೂರು, ಉಳಾಯಿಬೆಟ್ಟು ಪರಿಸರದಲ್ಲಿ ಹೆಚ್ಚುವರಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಗಾಯಾಳುಗಳನ್ನು ಯಶೋಧರ್, ಜಗದೀಶ್, ಸೌಮ್ಯ, ಬಬಿತ, ಮನೋಹರ್ ಮತ್ತು ವಿಶ್ವನಾಥ್ ಎಂದು ಗುರುತಿಸಲಾಗಿದೆ.