ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಬ ನೋಡಿ ಹಾಡ ಹಗಲೇ ಮನೆಯ ಬಾಗಿಲು ಒಡೆದು ಕಪಾಟಿನಲ್ಲಿಡಲಾಗಿದ್ದ ಚಿನ್ನಾಭರಣ ಹಾಗೂ ಸಾವಿರಾರು ರೂಪಾಯಿ ನಗದು ದೋಚಿ ಪರಾರಿಯಾದ ಘಟನೆ ಭಾನುವಾರ ಮಧ್ಯಾಹ್ನ ಕೋಟೇಶ್ವರದ ಮೇಪು ಎಂಬಲ್ಲಿ ನಡೆದಿದೆ.
ಮೇಪು ನಿವಾಸಿ ರಾಘವೇಂದ್ರ ಎಂಬುವರ ಮನೆಯಿಂದಲೇ ಕಳ್ಳರು ದರೋಡೆ ನಡೆಸಿದ್ದು, ಸುಮಾರು 14೦ ಗ್ರಾಂ ಚಿನ್ನಾಭರಣ ಹಾಗೂ ಒಂಭತ್ತು ಸಾವಿರ ರೂಪಾಯಿ ದೋಚಿದ್ದಾರೆ.
ಘಟನೆಯ ವಿವರ: ರಾಘವೇಂದ್ರ ಖಾಸಗೀ ಸಂಸ್ಥೆಯೊಂದರಲ್ಲಿ ಎಕೌಂಟೆಂಟ್. ತಾಯಿ ಹಾಗೂ ಮೂವರು ಅಕ್ಕಂದಿರು ಯಾವಾಗಲೂ ಮನೆಯಲ್ಲಿರುತ್ತಾರೆ. ಭಾನುವಾರ ಗುಡ್ಡಟ್ಟು ದೇವಸ್ಥಾನದಲ್ಲಿ ಹರಕೆ ನೀಡಲೆಂದು ಮನೆಯವರೆಲ್ಲರೂ ಮಧ್ಯಾಹ್ನ ಸುಮಾರು 12 ಗಂಟೆಗೆ ಮನೆಗೆ ಬಾಗಿಲು ಹಾಕಿ ಹೋಗಿದ್ದರು. ಸಂಜೆ ಮೂರು ಗಂಟೆ ವೇಳೆಗೆ ವಾಪಾಸು ಬಂದಾಗ ಬಾಗಿಲು ಒಡೆದು ದರೋಡೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಒಂಟಿ ಮನೆಯಾಗಿರುವುದರಿಂದ ಕಳ್ಳರಿಗೆ ದರೋಡೆ ನಡೆಸಲು ಅನುಕೂಲವಾಘಿದೆ ಎನ್ನಲಾಗುತ್ತಿದೆ. ಎದುರಿನ ಬಾಗಿಲ ಚಿಲಕ ಒಡೆದು ಒಳ್ಳ ನುಗ್ಗಿದ ಕಳ್ಳರು ಕಪಾಟಿನಲ್ಲಿಡಲಾಗಿದ್ದ ಎರಡು ನೆಕ್ಲೆಸ್, ಹತ್ತು ಜೊತೆ ಓಲೆ, ಎಂಟು ಉಂಗುರ, ಒಂದು ಚಿನ್ನದ ನಾಣ್ಯ, ಒಂದು ತಾಳಿ ಸರ, ಎರಡು ಎಳೆಯ ಒಂದು ಚೈನ್, ಎರಡು ನಾಣ್ಯಗಳು, ಎರಡು ಬೆಳ್ಳಿಯ ಲಕ್ಷ್ಮೀ ವಿಗ್ರಹಗಳು, ಹಾಗೂ ಕವರಿನಲ್ಲಿಡಲಾಗಿದ್ದ ಎಂಟು ಸಾವಿರ ರೂಪಾಯಿ ನಗದು ಮತ್ತು ಡಬ್ಬಿಯಲ್ಲಿ ಹಾಕಿಡಲಾಗಿದ್ದ ಒಂದು ಸಾವಿರ ರೂಪಾಯಿಗಳ ನಾಣ್ಯಗಳನ್ನು ಅಪಹರಿಸಿ ಹಿಂದಿನ ಬಾಗಿಲು ತೆರೆದು ಪರಾರಿಯಾಗಿದ್ದಾರೆ. ಸುಮಾರು ಮೂರುವರೆ ಲಕ್ಷ ರೂಪಾಯಿ ಸೊತ್ತು ಮತ್ತು ನಗದನ್ನು ಕಳ್ಳರು ಅಪಹರಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಅಪರಾಧ ಪತ್ತೆದಳದ ಅಧಿಕಾರಿಗಳು ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.