ಮಂಗಳೂರು,ಡಿ.08: ಭಾರತೀಯ ಜೈನ್ ಮಿಲನ್‌ನ ಮಂಗಳೂರು ಘಟಕದ ರಜತಮಹೋತ್ಸವ ಸಂಭ್ರಮ ಸಮಾರಂಭ ನಗರದ ಎಸ್‌ಡಿಎಂ ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಭಾರತೀಯ ಜೈನ್ ಮಿಲನ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಸಮಾರಂಭ ಉದ್ಘಾಟಿಸಿ, ಜೈನ್ ಮಿಲನ್ ಸಂಸ್ಥೆಯು ರಾಷ್ಟ್ರೀಯ ಮಟ್ಟದಲ್ಲಿ ಆಂದೋಲನ ಮಾಡಿರುವುದರಿಂದ ಕೇಂದ್ರ ಸರಕಾರ ಜೈನರಿಗೆ ಅಲ್ಪ ಸಂಖ್ಯಾತರ ಮಾನ್ಯತೆ ನೀಡಿದೆ. ಇದರಿಂದಾಗಿ ಕಳೆದ ವರ್ಷ 24 ಸಾವಿರ ಮಕ್ಕಳಿಗೆ ಸರಕಾರ ಎರಡು ಕೋಟಿ ವಿದ್ಯಾರ್ಥಿ ವೇತನ, 10 ಮಂದಿ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡಲು 10 ಲಕ್ಷ ರೂ. ದಂತೆ ನೀಡಿದೆ. ಸರಕಾರದಿಂದ ಸಿಗುವ ಸವಲತ್ತುಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರಮಿಸಬೇಕು ಎಂದರು.
ಮೀನುಗಾರಿಕೆ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಜೈನ ಸಮುದಾಯದಲ್ಲಿ ಜೈನ್ ಮಿಲನ್‌ನಿಂದ ಅಭಿಮಾನ ಹೆಚ್ಚಾಗಿದೆ. ಈ ಮೂಲಕ ಸಮುದಾಯ ಇನ್ನಷ್ಟು ಸಂಘಟಿತಗೊಳ್ಳಬೇಕು. ಸ್ವಾಭಿಮಾನದಿಂದ ಬದುಕಿ, ಧರ್ಮದ ಅನುಷ್ಠಾನ ಮಾಡಿಕೊಳ್ಳಬೇಕು ಎಂದರು.
ಪಂಪ್‌ವೆಲ್ ಮಹಾವೀರ ವೃತ್ತ ಮೂಲಕ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಹಾಗೂ ಮೇಲ್ಸೇತುವೆ ನಡೆಯಲಿದ್ದು, ಆಗ ವೃತ್ತವನ್ನು ಉಳಿಸಬೇಕು. ಕನಿಷ್ಠ ಪಕ್ಷ ಅದರ ಕಲಶ ಉಳಿಸಲು ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿದೆ ಎಂದರು.
ಕೇಂದ್ರದ ಮಾಜಿ ಸಚಿವ ವಿ.ಧನಂಜಯ ಕುಮಾರ್ ಮಾತನಾಡಿ, ನಮ್ಮಲ್ಲಿ ಧಾರ್ಮಿಕ ಭಾವನೆ ಅನುಷ್ಠಾನ ಮಾಡಿಕೊಳ್ಳಬೇಕು. ಭ್ರಾತೃತ್ವದಿಂದ ಕೆಲಸ ಮಾಡಬೇಕು. ದೇಶದ ಆರ್ಥಿಕತೆಗೆ ಜೈನ ಸಮುದಾಯದಿಂದ ಶೇ.30ರಷ್ಟು ಕೊಡುಗೆ ಇದೆ ಎಂದರು.
ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಮಲಮ್ಮ ಬಲ್ಲಾಳ್ ಮತ್ತು ಶ್ರೀಮನ್ಮ ಬಲ್ಲಾಳ್ ಅವರನ್ನು ಸನ್ಮಾನಿಸಲಾಯಿತು.
ಭಾರತೀಯ ಜೈನ್ ಮಿಲನ್‌ನ ಮಂಗಳೂರು ಘಟಕದ ಅಧ್ಯಕ್ಷ ಎಲ್.ಡಿ.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಪೆರಿಂಜೆ ದೇವಕುಮಾರ್ ಕಂಬಳಿ, ಪ್ರಸನ್ನ ಕುಮಾರ್, ಪುಷ್ಪರಾಜ್ ಜೈನ್, ಶೋಭಾಕರ ಬಲ್ಲಾಳ್, ಸುರೇಶ್ ಬಲ್ಲಾಳ್, ಗಣೇಶ್ ಪ್ರಸಾದ್‌ಜೀ ಮತ್ತಿತರರು ಇದ್ದರು.