ಮಂಗಳೂರು,ಡಿ.08: ಖ್ಯಾತ ರಾಕ್ ಕ್ಲೈಂಬರ್ ಚಿತ್ರದುರ್ಗದ ಜ್ಯೋತಿ ಯಾನೆ ಕೋತಿರಾಜ್ ಅವರು ತನ್ನ ಬದುಕಿನಲ್ಲೇ ಮೊದಲ ಬಾರಿಗೆ ಅತಿ ಎತ್ತರದ ಕಟ್ಟಡವಾದ ಮಂಗಳೂರಿನ ಪದವಿನಂಗಡಿಯ 24 ಮಹಡಿಯ ಇನ್‌ಲಾಂಡ್ ವಿಂಡ್ಸರ್ ನ್ನು ಏರಿ ಕನ್ನಡ ಬಾವುಟ ಅರಳಿಸುವ ಮೂಲಕ ತನ್ನ ದಾಖಲೆಯನ್ನು ನಿರ್ಮಿಸಿದ ಖುಷಿ ತಂದು ಕೊಟ್ಟಿದೆ.
ಭಾನುವಾರದ ರಜೆಯ ಮೂಡ್‌ನಲ್ಲಿದ್ದ ನೂರಾರು ಸಂಖ್ಯೆಯ ಸ್ಥಳೀಯ ಜನರು ಸೇರಿ ಕೋತಿರಾಜ್ ನ ಈ ಸಾಹಸ ನೋಡಿ ಸಂತೋಷ ವ್ಯಕ್ತ ಪಡಿಸಿದ್ದರು. ಬೆಳಗ್ಗೆ ಒಂದು ಬಾರಿ ಜನ ಸೇರುವ ಮೊದಲೇ ಯಾವುದೇ ಹಗ್ಗದ ಸಹಾಯವಿಲ್ಲದೆ ತನ್ನದೇ ಶೈಲಿಯಲ್ಲಿ ಕಟ್ಟಡದ ಮೇಲೇರಿದ್ದ ಕೋತಿರಾಜ್ 11 ಗಂಟೆ ವೇಳೆಗೆ ಜನ ಸೇರಿದ ಬಳಿಕ ತಮ್ಮ ಅಭಿಮಾನಿಗಳ ಒತ್ತಾಸೆಗೆ ಕಟ್ಟು ಬಿದ್ದು ಬಂಡೆ ಮೇಲೇರುವಾಗ ಬಳಸುವ ಬಿಲೇ ರೋಪ್ ಸೊಂಟಕ್ಕೆ ಕಟ್ಟಿಕೊಂಡು ಮತ್ತೆ ಮೇಲೇರುವುದಕ್ಕೆ ಸಿದ್ಧರಾದರು. ಸರಿಯಾಗಿ 11.10ಕ್ಕೆ ಕಟ್ಟಡದ ಬುಡದಿಂದ ಛಂಗನೆ ನೆಗೆದು ಕಟ್ಟಡದ ಬದಿ ಹಿಡಿದು ಮೇಲೇರಿ, ಬಳಿಕ ಕಿಟಿಕಿ ಫ್ರೇಮ್ ಮೆಟ್ಟಿ ಮೇಲಿನ ಕಿಟಿಕಿಗೆ ನೆಗೆದರು. ಇದೇ ಶೈಲಿಯಲ್ಲಿ ಐದನೇ ಮಹಡಿವರೆಗೂ ಹೋಗಿ, ಇನ್ನೂ ಐದರಲ್ಲೇ ಇದ್ದೆನಾ ಎನ್ನುತ್ತಾ ಸೇರಿದ್ದವರನ್ನು ನಗಿಸಿದರು.
ಮತ್ತೆ ಮೇಲೇರುತ್ತಾ ಹೋಗಿ 10ನೇ ಮಹಡಿಯ ಪಕ್ಕ ಇರುವ ಇನ್‌ಲಾಂಡ್ ಲಾಂಛನ ಮುಟ್ಟಿ ಕ್ಯಾಮೆರಾಗಳಿಗೆ ಫೋಸ್ ನೀಡಿದರು. ಮತ್ತೂಮ್ಮೆ ಕಾಲಿನಲ್ಲೇ ಗ್ರಿಪ್ ಮಾಡಿ ತಲೆ ಕೆಳಗೆ ಮಾಡಿ ಥೇಟ್ ಕೋತಿಯಂತೆಯೇ ತೂಗಿದರು.
ತನ್ನ ಸಾಹಸದ ಬಳಿಕ ಪತ್ರಿಕರ್ತರ ಜತೆ ಮಾತನಾಡಿದ ಕೋತಿರಾಜ್, ‘ನಾನೇರಿದ ಕಟ್ಟಡಗಳಲ್ಲೆಲ್ಲ ಇದೇ ಅತಿ ಎತ್ತರದ್ದು. ಇದಕ್ಕಿಂತ ಎತ್ತರದ ಬಂಡೆಗಳನ್ನು ಏರಿದ್ದೇನೆ. ಕಟ್ಟಡದ ಮಾಲಕರಿಂದ ಅನುಮತಿ ಸಿಗದ ಕಾರಣ ಕಟ್ಟಡ ಏರಲು ಸಾಧ್ಯವಾಗಿಲ್ಲ, ಆದರೆ ಇಲ್ಲಿ 300 ಅಡಿಯ ಈ ಕಟ್ಟಡವನ್ನೇರಲು ಮಾಲಕರು ಒಪ್ಪಿದ್ದರಿಂದ ಈ ಸಾಹಸ ಮಾಡಲು ಸಾಧ್ಯವಾಯಿತು’ನನ್ನ ಮುಂದಿನ ಸಾಹನ ದುಬೈನ ಬುರ್ಜ್ ಖಲೀಫಾ ಕಟ್ಟಡ ಏರಿ ದಾಖಲೆ ನಿರ್ಮಿಸುವ ಮನದಾಸೆ ಎಂದು ಪ್ರತಿಕ್ರಿಯಿಸಿದರು.
1 ಲಕ್ಷ ರೂ. ನಗದು ನೀಡಿ ಸಮ್ಮಾನ: ಈ ಸಂದರ್ಭ ಇನ್‌ಲಾಂಡ್ ಬಿಲ್ಡರ್ಸ್ ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ಅವರು ಜ್ಯೋತಿ ಯಾನೆ ಕೋತಿರಾಜ್ ಸಾಹಸವನ್ನು ಮೆಚ್ಚಿ 1 ಲಕ್ಷ ರೂ. ನಗದು ಬಹುಮಾನ ಹಾಗೂ ಇನ್‌ಲಾಂಡ್ ವಿಂಡ್ಸರ್ ಕಟ್ಟಡದ ಪ್ರತಿಕೃತಿ ನೀಡಿ ಸಮ್ಮಾನಿಸಿದರು. ಸಂಸ್ಥೆಯ ನಿರ್ದೇಶಕ ವಹಾಜ್ ಯೂಸುಫ್, ಚಿತ್ರ ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್, ಚಿತ್ರನಟಿ ದೀಪಿಕಾದಾಸ್, ಸಿನಿಮಾ ಛಾಯಾಗ್ರಾಹಕ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.