ಮಂಗಳೂರು,ಡಿ.09: ಜಿಲ್ಲೆಯಲ್ಲಿ ತಲೆದೋರಿರುವ ಅಶಾಂತಿಯ ಲಾಭವನ್ನು ದುಷ್ಕರ್ಮಿಗಳು ಪಡೆಯಲು ಮುಂದಾಗಿದ್ದು ಸೋಮವಾರ ರಾತ್ರಿ ಸುರತ್ಕಲ್ ನಲ್ಲಿ ಯುವಕನೊಬ್ಬನಿಗೆ ಚೂರಿಯಿಂದ ಇರಿದ ಬೆನ್ನಿಗೆ ನಗರದ ಗೂಡ್ಸ್ ಶೆಡ್ ಹಾಗೂ ಬಂಟ್ವಾಳ ಠಾಣಾ ವ್ಯಾಪ್ತಿಯ ಮಾರಿಪಳ್ಳದಲ್ಲೂ ಇಬ್ಬರು ಅಮಾಯಕರಿಗೆ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಲಾಗಿದೆ.
ಗೂಡ್ಸ್ ಶೆಡ್ ನಿವಾಸಿ ಯೋಗೀಶ್ ಎಂಬವರು ತಮ್ಮ ಅಂಗಡಿಯಲ್ಲಿದ್ದ ಸಂದರ್ಭ ಸಿಗರೇಟ್ ಖರೀದಿ ಮಾಡುವ ನೆಪದಲ್ಲಿ ಬೈಕ್ ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ಯುವಕರು ಏಕಾಏಕಿ ಚೂರಿಯಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕುಸಿದುಬಿದ್ದ ಯೋಗೀಶ್ ಅವರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಇದೊಂದು ಪೂರ್ವದ್ವೇಷದಿಂದ ನಡೆದ ಕೃತ್ಯ ಎನ್ನಲಾಗಿದ್ದು, ಇದನ್ನು ಜಿಲ್ಲೆಯಲ್ಲಿ ಈಗಾಗಲೇ ನಡೆಯುತ್ತಿರುವ ಕೋಮುದ್ವೇಷ ಪ್ರಕರಣದ ಜೊತೆ ಥಳಕು ಹಾಕಲು ದುಷ್ಕರ್ಮಿಗಳು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೊಂದು ಪ್ರಕರಣದಲ್ಲಿ ಮಾರಿಪಳ್ಳ ಬಳಿ ಜಯಂತ್ ಎಂಬಾತನ ಮೇಲೆ ಚೂರಿ ಮತ್ತು ಮಾರಕಾಯುಧಗಳಿಂದ ದಾಳಿ ಮಾಡಿದ ತಂಡ ಪರಾರಿಯಾಗಿದೆ. ಜಯಂತ್ ಗಂಭೀರ ಗಾಯಗೊಂಡಿದ್ದು ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲವು ಕಿಡಿಗೇಡಿಗಳು ಈ ಸಂದರ್ಭವನ್ನು ತಮ್ಮ ದ್ವೇಷ ಸಾಧನೆಗೆ ಬಳಸುತ್ತಿದ್ದು, ನಾಗರೀಕರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಇದೇ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರ ಆದೇಶದ ಮೇರೆಗೆ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ತಂಡ ರಚಿಸಿದ್ದು ಶೋಧ ಕಾರ್ಯ ಕೈಗೊಂಡಿದ್ದಾರೆ.