ಮಂಗಳೂರು,ಡಿ.15: ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಎಸ್.ಆರ್. ಹೆಗ್ಡೆ ವೇದಿಕೆಯಲ್ಲಿ ನಡೆದ ವಿಶ್ವ ತುಳುವರೆ ಪರ್ಬದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಸುರತ್ಕಲ್ ಬಂಟರ ಸಂಘದ ಸದಸ್ಯ ಕಲಾವಿದರಿಂದ ಪ್ರದರ್ಶನಗೊಂಡ ತುಳು ಸಂಸ್ಕೃತಿಯನ್ನು ಸಾರುವ `ತುಳುನಾಡ್ದ ಪೊರ್‍ಲುತಿರ್‍ಲ್’ ಪ್ರಹಸನ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರಿಂದ ಶ್ಲಾಘನೆಗೊಳಪಟ್ಟಿತು.
ಸುರತ್ಕಲ್ ಬಂಟರ ಸಂಘದ ಸದಸ್ಯರು ನಡೆಸಿಕೊಟ್ಟ ಪ್ರಾತ್ಯಕ್ಷಿಕೆ ತುಳುನಾಡಿನ ಸಂಸ್ಕೃತಿಯ ಹಿರಿಮೆಯನ್ನು ಸಾರುವ ಎಲ್ಲಾ ಝಲಕ್‌ಗಳು ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು. ಸಮಾರೋಪ ಸಮಾರಂಭದಲ್ಲಿ ಪೇಜಾವರ ಶ್ರೀಗಳು ಮಾತನಾಡುತ್ತಾ ನನಗೆ 80 ವರ್ಷಗಳ ಹಿಂದಿನ ನೆನಪಾಗುತ್ತದೆ. ನಮ್ಮ ಸಂಸ್ಕೃತಿ, ನಮ್ಮ ಆಚಾರ ವಿಚಾರಗಳನ್ನು ವೇದಿಕೆಗಳಲ್ಲಿ ಪ್ರದರ್ಶಿಸುವ ಮೂಲಕ ನಮ್ಮತನ ಏನು ಎಂಬುದು ತಿಳಿಯುತ್ತದೆ ಎಂದರು.
ಡಾ. ವಿರೇಂದ್ರ ಹೆಗ್ಗಡೆಯವರು ಮಾತನಾಡುತ್ತಾ, ಸಂಸ್ಕೃತಿಯ ಕುರಿತು ಎರಡು ಗಂಟೆಯಲ್ಲಿ ಮಾತನಾಡುವ ವಿಚಾರಗಳನ್ನು ಸುರತ್ಕಲ್ ಬಂಟರ ಸಂಘದವರು 40ನಿಮಿಷದಲ್ಲಿ ಪ್ರದರ್ಶನದ ಮೂಲಕ ತೋರಿಸಿಕೊಟ್ಟರು ಎಂದು ಕಲಾವಿದರನ್ನು ಕೊಂಡಾಡಿದರು.
ಪರಶುರಾಮನ ಕೊಡಲಿ ಎಸೆಯುವ ಸನ್ನಿವೇಶದಿಂದ ಹಿಡಿದು ತುಳುನಾಡಿನ ವೀರ ಪುರುಷರನ್ನು ಸ್ಮರಿಸುವ ಮೂಲಕ ಈ ಪ್ರಾತ್ಯಕ್ಷಿಕೆ ಜನಮೆಚ್ಚುಗೆ ಪಡೆಯಿತು. ಕೃಷಿ ಕಾಯಕ, ತುಡರ್‌ಪರ್ಬ(ದೀಪಾವಳಿ)ನಾಗರಾಧನೆ, ಕುರಲ್ ಪರ್ಬ(ಕದಿರು ಕಟ್ಟುವ ಹಬ್ಬ) ಕೆಡ್ಡಸ, ದೈವಾರಾಧನೆ, ಯಕ್ಷಗಾನದ ಮೂಲಕ ದೇವಿ ಮಹಾತ್ಮೆ, ಗೋಪೂಜೆ, ಕೊಜಂಬು, ಕರ್‌ಪತ್ತನವು ಎಲ್ಲವೂ ವೇದಿಕೆಯಲ್ಲಿ ಪ್ರದರ್ಶನಗೊಂಡವು. ಕೋಟಿ ಚೆನ್ನಯರು, ಕಾಂತಾಬಾರೆ, ಬೂದಾಬಾರೆ, ದೇವುಪೂಂಜೆ, ಗಂಡನ ಮನೆಯವರ ವಿರುದ್ಧ ಸಿಡಿದೆದ್ದು ತೊಟ್ಟಿಲ ಮಗುವಿನೊಂದಿಗೆ ಹೊರಟ ಕೆಚ್ಚೆದೆಯ ಸತ್ಯಾನಾಪುರದ ಸಿರಿ, ಅಪ್ರತಿಮ ಸಾಹಸಿಗ ಅಗೋಳಿಮಂಜಣ್ಣ, ಉಳ್ಳಾಲ ವೀರರಾಣಿಅಬ್ಬಕ್ಕನಂತಹ ತುಳುನಾಡಿನ ವೀರರನ್ನು ಸ್ಮರಿಸುವ ಮೂಲಕ ಈ ಪ್ರಾತ್ಯಕ್ಷಿಕೆ ನೆರದ ಪ್ರೇಕ್ಷಕರಿಂದ ಪ್ರಶಂಸೆಗೊಳಪಟ್ಟಿತು.
“ಪುಟ್ಟಿ ನರಮಾನಿ ಸೈಯೆರೆ ಉಂಡು ಉಂದುವೆ ಜಗದ ನಿಯಮ, ತುಳುವ ನಾಡ್‌ಡ್ ಪುಟ್ಟಿನವೇ ನಮ್ಮ ಸಾರ ಜನ್ಮಪುಣ್ಯ, ಒರಿಪುಗ ತುಳುವನಾಡ ಧರ್ಮ” ಎನ್ನುವ ಕ್ಲೈಮಾಕ್ಸ್ ಹಾಡು ಪ್ರಹಸನದ ಹೈಲೈಟ್ಸ್ ಆಗಿದೆ. ತುಳುನಾಡ್ದ ಪೊರ್‍ಲು-ತಿರ್‍ಲ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರು ತಿಂಗಳ ಮಗುವಿನಿಂದ 80 ವರ್ಷದ ವೃದ್ದರ ತನಕ ಸುಮಾರು 102 ಮಂದಿ ಕಲಾವಿದರು ಬಣ್ಣ ಹಚ್ಚಿದ್ದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಳ ಸಂಯೋಜನೆಯಲ್ಲಿ ನವೀನ್ ಶೆಟ್ಟಿ ಅಳಕೆ ನಿರ್ದೇಶನ ನೀಡಿದ್ದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಲೀಲಾಧರ ಶೆಟ್ಟಿ ನೇತೃತ್ವದಲ್ಲಿ ತಂಡ ಭಾಗವಹಿಸಿತು. ರಾಜೇಶ್ವರಿ ಡಿ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.