ಕುಂದಾಪುರ: ಆಧುನಿಕ ಯುಗದಲ್ಲಿ ನೀವೇನಾದರೂ ಯಾರನ್ನಾದರೂ ನಂಬಿ ವ್ಯವಹಾರ ಮಾಡುತ್ತೀರೋ ಅದಕ್ಕೆ ಮುನ್ನ ಸ್ವಲ್ಪ ಯೋಚಿಸಿ ಎನ್ನುವುದಕ್ಕೆ ಇಲ್ಲೊಂದು ಊದಾಹರಣೆ ಇದೆ. ಕೊರಿಯರ್ ಸೇವೆಯಲ್ಲಿಯೇ ನಂಬಿಕಸ್ತ ಎಂದು ಬೀಗುತ್ತಿರುವ ಪ್ರೊಫೆಶನಲ್ ಕೊರಿಯರ್ ಸರ್ವೀಸ್‌ನಲ್ಲಿಯೂ ಗೋಲ್‌ಮಾಲ್ ಆಗುತ್ತಿದೆ ಎನ್ನುವುದಕ್ಕೆ ಶುಕ್ರವಾರ ಬೆಂಗಳೂರಿನಿಂದ ಕಳುಹಿಸಲಾಗಿದ್ದ ಮೊಬೈಲ್ ಹ್ಯಾಂಡ್‌ಸೆಟ್ ಕುಂದಾಪುರ ಮುಟ್ಟುವಾಗ ಅಕ್ಷತೆ ಕಾಳು ಹಾಗೂ ಕುಂಕುಮವಾಗಿ ಪರಿವರ್ತನೆಯಾದ ಘಟನೆ ಸಾಕ್ಷಿ ಒದಗಿಸಿದೆ.
ಕುಂದಾಪುರದ ಮೊಬೈಲ್ ಶೋರೂಂ ಅಂಗಡಿಯ ಮಾಲೀಕ ಕೋಟೇಶ್ವರದ ಮಂಜುನಾಥ ಎನ್ನುವವರಿಗೆ ಅವರ ಸಹೋದರಿ ಹುಟ್ಟು ಹಬ್ಬದ ಪ್ರಯುಕ್ತ ಮೊಬೈಲ್ ಹ್ಯಾಂಟ್‌ಸೆಟ್ ಒಂದನ್ನು ಇದೇ ಪ್ರೊಪೆಶನಲ್ ಕೊರಿಯರ್ ಮೂಲಕ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಪಂಚಮುಖಿ ಗಣಪತಿ ದೇವಸ್ಥಾನದ ಎದುರುಗಡೆಯ ಪ್ರೊಫೆಶನಲ್ ಕೊರಿಯರ್ ಸೆಂಟರ್‌ನಿಂದ ಶುಕ್ರವಾರ ಕಳುಹಿಸಿದ್ದರು. ಶನಿವಾರ ಸಂಜೆ ಸುಮಾರು ೩ ಗಂಟೆಗೆ ಕುಂದಾಪುರದ ಕೊರಿಯರ್ ಹುಡುಗ ಮಂಜುನಾಥರಿಗೆ ಸೇವೆ ತಲುಪಿಸಿದ್ದಾರೆ. ಆದರೆ ಕೊರಿಯರ್ ಓಪನ್ ಮಾಡಿದಾಗ ಅದರಲ್ಲಿ ಮೊಬೈಲ್ ಬದಲಿಗೆ ಅಕ್ಷತೆ ಕಾಳು, ಕುಂಕುಮ, ಮುದ್ದೆ ಮಾಡಿಡಲಾದ ಪೇಪರ್ ಸೂರುಗಳಿದ್ದವು.
ಈ ಬಗ್ಗೆ ಕುಂದಾಪುರದ ಕೊರಿಯರ್ ಸೆಂಟರ್ ಮಾಲಕರ ಜೊತೆಗೆ ಮಾತನಾಡಿದರೆ ಅದಕ್ಕೂ ನಮಗೂ ಸಂಬಂಧವಿಲ್ಲ. ನೀವೇನಿದ್ದರೂ ಬೆಂಗಳೂರಿನಲ್ಲಿ ಕೇಳಿ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಕುಂದಾಫುರ ಪೊಲೀಸ್ ಠಾಣೆಗೆ ದೂರು ನೀಡಲೆಂದು ತೆರಳಿದ್ದ ಮಂಜುನಾಥರಿಗೆ ಅಲ್ಲಿಯೂ ಸಿಕ್ಕಿದ ಉತ್ತರವೆಂದರೆ, ಈದು ಬೆಂಗಳೂರಿನ ಸೆಂಟರ್‌ನಲ್ಲಿ ನಡೆದ ಕೃತ್ಯವಾಗಿದ್ದು, ಅಲ್ಲಿಗೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ ಎಂಬುದು.
ಒಟ್ಟಾರೆಯಾಗಿ ಮೊಬೈಲ್ ಕಳೆದುಕೊಂಡಿರುವುದು ಒಂದು ಕಡೆಯಾದರೆ ನಂಬಿಕೆ ಇಟ್ಟು ಕೊರಿಯರ್ ಸೇವೆ ನೀಡಿದ ಪ್ರೊಫೆಶನಲ್ಸ್ ನಿರ್ಲಕ್ಷ್ಯದ ಉತ್ತರ ಇನ್ನೊಂದು ಕಡೆ. ಆದರೆ ಇದೆಲ್ಲದರ ನಡುವೆ ಕೊರಿಯರ್ ಸೆಂಟರ್‌ಗಳಲ್ಲಿ ಪಾರ್ಸೆಲ್ ಒಳಗಿನ ಸೊತ್ತುಗಳನ್ನು ಲಪಟಾಯಿಸುವ ಜಾಲವೇ ಇದೆ ಎನ್ನುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಉಂಟು ಮಾಡಿದೆ.