ಕುಂದಾಪುರ: ಗಂಗೊಳ್ಳಿಯ ಜಿಲ್ಲಾ ಪಂಚಾಯಿತಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕಟ್ಟಡಕ್ಕೆ ಭಾನುವಾರ ತಡ ರಾತ್ರಿಯಲ್ಲಿ ಕಿಡಿಗೇಡಿಗಳು ಬಾಗಿಲು ಒಡೆದು ಹಾನಿ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಶಾಲೆಯ ಪಕ್ಕದಲ್ಲಿರುವ ಖಾಸಗೀ ಶಾಲೆಯಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಬಾಗಿಲು ಒಡೆದುದರ ಕಾರಣ ತಿಳಿದು ಬಂದಿಲ್ಲ. ಕಟ್ಟಡ ಹಳೆಯದಾಗಿದ್ದು, ಕಟ್ಟಡದೊಳಗೆ ಬಿಸಿಯೂಟಕ್ಕೆ ಬಳಸುವ ಅಕ್ಕಿ ಸಾಮಗ್ರಿಗಳು, ಗ್ಯಾಸ್ ಸಿಲಿಂಡರ್ ಮೊದಲಾದ ಸೊತ್ತುಗಳಿದ್ದರೂ ಕಿಡಿಗೇಡಿಗಳು ಅದನ್ನು ಹೊತ್ತೊಯ್ಯದೇ ಇರುವ ಕಾರಣ ನಿಗೂಢವಾಗಿದ್ದು, ಯಾರೋ ದುರುದ್ಧೇಶಪೂರ್ವಕವಾಗಿ ಈ ಕೃತ್ಯವೆಸಗಿರಬಹುದೆಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.