ಕುಂದಾಪುರ: ಕಸ್ತೂರಿ ರಂಗನ್ ವರದಿಯಲ್ಲಿ ವಂಡ್ಸೆ, ಚಿತ್ತೂರು, ಇಡೂರು, ಹೊಸೂರು, ಕೆರಾಡಿ, ಬೆಳ್ಳಾಲ, ಆಲೂರುಗಳ ಅವೈಜ್ಞಾನಿಕ ಸೇರ್ಪಡೆಗೊಳಿಸಲಾಗಿದೆ. ತಕ್ಷಣ ವರದಿಯಿಂದ ಈ ಗ್ರಾಮಗಳನ್ನು ಹೊರಗಿಡಬೇಕು ಎಂದು ಆಗ್ರಹಿಸಿ ಏಳು ಗ್ರಾಮಗಳ ರೈತರು, ಗ್ರಾಮಸ್ಥರು ವಂಡ್ಸೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ವರದಿ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ನೀಡಿದ ಭಾಕಿಸಂ ಜಿಲ್ಲಾ ಪ್ರಧಾನಕಾರ್ಯದರ್ಶಿ ಸತ್ಯಾನಾರಾಯಣ ಉಡುಪ, ಡಾ.ಕಸ್ತೂರಿ ರಂಗನ್ ವರದಿಯಲ್ಲಿ ಸಾಧಕ ಹಾಗೂ ಬಾಧಕಗಳು ಇದ್ದರೂ ಕೂಡಾ ಕೆಲವೊಂದು ಗ್ರಾಮಗಳನ್ನು ಅನಗತ್ಯವಾಗಿ ಸೇರಿಸಲ್ಟಟ್ಟಿರುವುದರಿಂದ ಗ್ರಾಮಸ್ಥರು ಒಗ್ಗಟ್ಟಾಗಿ ತಮ್ಮ ಮನವಿಯನ್ನು ಸರ್ಕಾರಕ್ಕೆ ತುರ್ತಾಗಿ ತಿಳಿಸುವ ಅಗತ್ಯವಿದೆ. ಸೂಕ್ತ ಸಮೀಕ್ಷೆಗಳು ನಡೆಯದಿರುವುದು, ಜಿಲ್ಲಾಡಳಿತ ಸಕಾಲಿಕವಾಗಿ ಸ್ಪಷ್ಟ ವರದಿ ನೀಡದೇ ಇರುವುದು ಈ ಗೊಂದಲಗಳಿಗೆ ಕಾರಣವಾಗಿದ್ದು, ಸುಪ್ರಿಂಕೋರ್ಟ್‌ನ ಹಸಿರು ಪೀಠ ಯೋಜನೆ ಅನುಷ್ಠಾನಿಸುವ ಮೊದಲು ಜನಾಭಿಪ್ರಾಯವನ್ನು ತಿಳಿಸುವ ಕೆಲಸವಾಗಬೇಕು ಎಂದರು.
ಜಡ್ಕಲ್‌ನ ಪಿ.ಎಲ್ ಜೋಸ್ ಮಾತನಾಡಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಕಾಂಗ್ರೆಸ್ ವಂಡ್ಸೆ ಬ್ಲಾಕ್ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಜಿ.ಪಂ.ಸದಸ್ಯೆ ಇಂದಿರಾ ಶೆಟ್ಟಿ, ತಾ.ಪಂ.ಸದಸ್ಯ ಹೆಚ್.ಮಂಜಯ್ಯ ಶೆಟ್ಟಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ|ಅತುಲ್ ಕುಮಾರ್ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ ಮೊದಲಾದ ಗಣ್ಯರು, ಗ್ರಾ.ಪಂ.ಗಳ ಅಧ್ಯಕ್ಷರುಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಎಲ್ಲಾ ಪಕ್ಷಗಳ ಪ್ರಮುಖರು ಪಕ್ಷಾತೀತವಾಗಿ ಭಾಗವಹಿಸಿದ್ದರು. ಚಿತ್ತೂರಿನಿಂದ ವಂಡ್ಸೆಯ ತನಕ ಜಾಥಾದ ಮೂಲಕ ಪ್ರತಿಭಟನಾಕಾರರು ಸಾಗಿ ಬಂದರು. ಚಿತ್ತೂರು ಮತ್ತು ವಂಡ್ಸೆಯಲಿ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಲಾಯಿತು. ಸಹಿ ಸಂಗ್ರಹ ಪ್ರಕ್ರಿಯೆಯೂ ಈ ಸಂದರ್ಭ ನಡೆಯಿತು.
ವಂಡ್ಸೆ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು.
ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಪ್ರದೇಶ ವ್ಯಾಪ್ತಿಯಲ್ಲಿ ಈ ಏಳು ಗ್ರಾಮಗಳನ್ನು ಸೇರಿಸಿರುವುದು ಈ ತನಕ ಗ್ರಾ.ಪಂ.ಗಾಗಗಲಿ ನಿವಾಸಿಗಳಿಗೆ ಇಲಾಖೆಯಿಂದ ಯವುದೇ ಮಾಹಿತಿ ಬಂದಿಲ್ಲ. ಉಪಗ್ರಹ ಆಧಾರಿತ ಸಮೀಕ್ಷೆ ನಡೆಸಿ ಅವೈಜ್ಞಾನಿಕವಾಗಿ ಸೇರ್ಪಡೆಗೊಳಿಸಲಾಗಿದೆ. ಪ್ರತಿ ಗ್ರಾಮಗಳ ಭೌತಿಕ ಸರ್ವೇ ಮಾಡದೇ ಗ್ರಾ.ಪಂ.ಗಳನ್ನು ಕತ್ತಲಲ್ಲಿ ಇಟ್ಟು ಈ ವರದಿ ಸಿದ್ಧಪಡಿಸಲಾಗಿದೆ. ಈ ಬಗ್ಗೆ ಪಾರದರ್ಶಕ ಚರ್ಚೆ ಆಗಬೇಕು. ಏಳು ಗ್ರಾಮಗಳನ್ನು ವರದಿಯ ಹೊರಗಿಡಬೇಕು. ಈ ಮನವಿಗೆ ಸ್ಪಂದಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುತ್ತೇವೆ.
-ಉದಯಕುಮಾರ್ ಶೆಟ್ಟಿ, ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷರು