ಉಡುಪಿ: ಬ್ಯಾಂಕಿನ ಮ್ಯಾನೇಜರ್ ಎಂದು ಹೇಳಿಕೊಂಡು ಮೊಬೈಲಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಎಟಿಎಂ ಡೆಬಿಟ್ ಕಾರ್ಡಿನ ಸಂಪೂರ್ಣ ಮಾಹಿತಿ ಪಡೆದು ಮಹಿಳೆಯ ಬ್ಯಾಂಕ್ ಖಾತೆಯಿಂದ 19,619 ರೂ. ನಗದನ್ನು ಲಪಟಾಯಿಸಿದ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡಕ ಕುದಿ ಗ್ರಾಮದ ಕೊಡಿಬೆಟ್ಟುವಿನ ಜಗದೀಶ್ ನಾಯಕ್ ಅವರ ಪತ್ನಿ ರಾಜಶ್ರೀ ಅವರು ದೂರು ನೀಡಿದವರು.
ಗಂಡನ ಮೊಬೈಲಿಗೆ ಡಿ. 14ರಂದು ಕರೆಯೊಂದು ಬಂದಿದ್ದು, ನಾನು ಸ್ಟೇಟ್ ಬ್ಯಾಂಕಿನ ಮ್ಯಾನೇಜರ್ ದಿಲ್ಲಿಯಿಂದ ಮಾತನಾಡುತ್ತಿದ್ದೇನೆ. ನಿಮ್ಮಲ್ಲಿ ಇರುವ ಡೆಬಿಟ್ ಕಾರ್ಡಿನ ವ್ಯಾಲಿಡಿಟಿ ಎಲ್ಲಿಯವರೆಗೆ ಇದೆ ಎನ್ನುವುದನ್ನು ಕಾರ್ಡಿನಲ್ಲಿ ಗಮನಿಸಿಕೊಳ್ಳಿ. ಅದನ್ನು ಮುಂದುವರಿಸಲು ಕೆಲವು ಮಾಹಿತಿ ಬೇಕು ಎಂದು ಹೇಳಿಕೊಂಡು ಉಳಿತಾಯ ಖಾತೆಯ ಸಂಖ್ಯೆ, ಕಾರ್ಡಿನ ಪಿನ್ ನಂಬರ್, ಡೆಬಿಟ್ ಕಾರ್ಡಿನ 16 ಸಂಖ್ಯೆಯ ನಂಬರ್ ಕೇಳಿ ಪಡೆದುಕೊಂಡಿದ್ದರು. ತದನಂದರ ಸಂಶಯಗೊಂಡು ಬ್ಯಾಂಕಿನ ಎಟಿಎಂಗೆ ಹೋಗಿ ನೋಡಿದಾಗ ಖಾತೆಯಿಂದ ಹಣ ಡ್ರಾ ಮಾಡಿರುವುದು ಗೊತ್ತಾಗಿದೆ.
ಡಿ. 15ರಂದು ಬ್ಯಾಂಕಿಗೆ ತೆರಳಿ ಖಾತೆಯನ್ನು ಪರಿಶೀಲಿಸಿದಾಗ ಹಣ ಡ್ರಾ ಆಗಿರುವುದು ಪತ್ತೆಯಾಗಿದೆ. ಯಾರೋ ಅಪರಿಚಿತರು ಎಟಿಎಂ ಕಾರ್ಡಿನ ಮಾಹಿತಿ ಪಡೆದು ವಂಚಿಸಿದ್ದಾರೆ ಎಂದು ರಾಜಶ್ರೀ ಅವರು ದೂರಿನಲ್ಲಿ ತಿಳಿಸಿದ್ದಾರೆ.