ಮಂಗಳೂರು, ಡಿ.17: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯು ಡಿ.20ರಂದು ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ನಗರದ ಲಾಲ್‌ಬಾಗ್‌ನಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ತಿಳಿಸಿದ್ದಾರೆ.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9:30ಕ್ಕೆ ಸಮ್ಮೇಳನವನ್ನು ಕನ್ನಡದ ಪ್ರಸಿದ್ಧ ಸಾಹಿತಿ, ನೃಪತುಂಗ ಪ್ರಶಸ್ತಿ ವಿಜೇತ ಕುಂ.ವೀರಭದ್ರಪ್ಪ ಉದ್ಘಾಟಿಸಲಿರುವರು ಎಂದು ತಿಳಿಸಿದರು. ಹಿರಿಯ ಕೊಂಕಣಿ ಸಾಹಿತಿ ಎಡ್ವಿನ್ ನೆಟ್ಟೊ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಸಹ ಪ್ರಾಧ್ಯಾಪಕ ಡಾ. ಶೋಭಾ ನೀಲಾವರ ಗೌರವ ಅತಿಥಿಯಾಗಿ ಭಾಗವಹಿಸುವರು ಎಂದರು.
ಕೊಂಕಣಿಯ ಪ್ರಸಿದ್ಧ ಸಾಹಿತಿ ಎಡ್ವಿನ್ ಜೆ.ಎಫ್.ಡಿಸೋಜ ಬರೆದ 1,008 ಪುಟಗಳ ಕಾದಂಬರಿ ‘ಉಣ್ಯಾ ಭಾವಾಡ್ತಾಚೆ’ ಹಾಗೂ ಆ್ಯಂಡ್ರೂ ಎಲ್. ಡಿಕುನ್ಹರ ‘ಆಯೆರಾಚೊ ಬೂಕ್’ ಕವಿತಾ ಸಂಕಲನ ಲೋಕಾರ್ಪಣೆಗೊಳ್ಳಲಿದೆ. ನಂತರ ‘2000 ಇಸವಿಯ ನಂತ ರದ ಕೊಂಕಣಿ ಸಾಹಿತ್ಯ’ದ ಬಗ್ಗೆ ಆಲ್ವಿನ್ ದಾಂತಿ, ಪೆರ್ನಾಲ್ ಮತ್ತು ‘ಕೊಂಕಣಿ ಸಂಸ್ಕೃತಿಯ ಮೇಲೆ ಜಾಗತೀಕರಣದ ಪ್ರಭಾವ’ ಬಗ್ಗೆ ಶಕುಂತಳಾ ಆರ್. ಕಿಣಿ ವಿಚಾರ ಮಂಡಿಸುವರು. ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಶಿವರಾಮ್ ಕಾಮತ್ ವಹಿಸಲಿರುವರು. ಎಂ.ವಿ.ಕಾಮತ್ ವಿಚಾರಗೋಷ್ಠಿಯಲ್ಲಿ ಕೊಂಕಣಿ ಶಿಕ್ಷಣದ ಬಗ್ಗೆ ಪ್ರೊ. ಕ್ಸೇವಿಯರ್ ಡಿಸೋಜ ಹಾಗೂ ಮಾಧ್ಯಮ ಮತ್ತು ಕೊಂಕಣಿಯ ಬಗ್ಗೆ ವಂ. ಫ್ರಾನ್ಸಿಸ್ ರಾಡ್ರಿಗಸ್ ವಿಷಯ ಮಂಡಿ ಸಲಿರುವರು. ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಮೋಹನ್ ಪೈ ವಹಿಸಲಿರುವರು.
ಮಧ್ಯಾಹ್ನ 2 ಗಂಟೆಗೆ ಜೆರಿ ರಸ್ಕಿನ್ನಾ ಅವರ ನೇತೃತ್ವದಲ್ಲಿ 10 ಕವಿಗಳ ಕವಿಗೋಷ್ಠಿ ನಡೆಯಲಿದೆ. ಸಂಜೆ 4ರಿಂದ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಿಂದ ಹೊರಟು ಲೇಡಿಹಿಲ್ ವೃತ್ತವಾಗಿ ಮನಪಾ ಮುಂಭಾಗದಿಂದ ಕೊಂಕಣಿ ಅಕಾಡಮಿಯ ಬಳಿಯಿಂದ ಮತ್ತೆ ಸಭಾಂಗಣವನ್ನು ಸೇರಲಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಾಧ್ಯಕ್ಷ ಅ.ವಂ. ಅಲೋಶಿಯಸ್ ಪಾವ್ಲ್ ಡಿಸೋಜ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಭಾಗವಹಿಸಲಿರುವರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರೊಸಾರಿಯೊ ಮತ್ತು ಪಾದುವಾ ಕಾಲೇಜುಗಳ ಕೊಂಕಣಿ ಕ್ಲಬ್ ವಿದ್ಯಾರ್ಥಿಗಳಿಂದ ನೃತ್ಯ ಮತ್ತು ಗಾಯನ, ನೃತ್ಯ ವಿದ್ಯಾಲಯದ ವಿದ್ಯಾರ್ಥಿಗಳ ಮತ್ತು ಖಾರ್ವಿ, ಸಿದ್ದಿ, ಕುಡ್ಮಿ, ಗಾವಳಿ, ದಾಲ್ದಿ, ನವಾಯಿತಿ, ಬ್ರಾಸ್ ಬ್ಯಾಂಡ್ ತಂಡಗಳ ಜಂಟಿ ಆಯೋಜನೆಯಲ್ಲಿ ಕೊಂಕಣಿ ನೃತ್ಯ- ಸಂಗೀತ ರೂಪಕ- ಸಮಗ್ರ ಕೊಂಕಣಿ ದರ್ಶನ ನಡೆಯಲಿದೆ. ಮುರಳೀಧರ್ ಕಾಮತ್ ಮತ್ತು
ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂದರ್ಭ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ವಿವಿಧ ಕೊಂಕಣಿ ಸಾಧಕರನ್ನು ಸನ್ಮಾನಿಸಲಾಗುವುದು. ಕೊಂಕಣಿ ಅಕಾಡಮಿ ಹೊರತಂದಿರುವ ಕೊಂಕಣಿ ಕ್ಯಾಲೆಂಡರ್ ಹಾಗೂ ಅಕಾಡಮಿಯ ನವೀಕೃತ ವೆಬ್‌ಸೈಟ್‌ನ ಉದ್ಘಾಟನೆಯೂ ಈ ಸಂದರ್ಭ ನಡೆಯಲಿದೆ ಎಂದು ವಿವರ ನೀಡಿದರು.
ಅಕಾಡೆಮಿ ರಿಜಿಸ್ಟ್ರಾರ್ ಡಾ.ಬಿ.ದೇವದಾಸ ಪೈ, ಕೊಂಕಣಿ ಸಾಹಿತ್ಯ ಸಮ್ಮೇಳನ ಸಂಚಾಲಕ ಸಿರಿಲ್ ಸಿಕ್ವೇರ, ಕೊಂಕಣಿ ಭಾಷಾ ಮಂಡಳಿ ಅಧ್ಯಕ್ಷೆ ಗೀತಾ ಸಿ. ಕಿಣಿ, ಕೊಡಿಯಾಲ ಖಬರ್ ಸಂಪಾದಕ ಎನ್.ವೆಂಕಟೇಶ ಬಾಳಿಗ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.