ಕುಂದಾಪುರ: ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ತೆರಳುತ್ತಿದ್ದ ಸರ್ಕಾರೀ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಪರಿಣಾಮ ಶಿಕ್ಷಕ ಸೇರಿದಂತೆ ಏಳು ಜನ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಶುಕ್ರವಾರ ಸಂಜೆ ಸುಮಾರು 6.30 ಗಂಟೆಗೆ ಕೊಲ್ಲೂರು ಹೆಮ್ಮಾಡಿ ರಸ್ತೆಯ ವಂಡ್ಸೆ ಸಮೀಪದ ಶಾರ್ಕೆ ಎಂಬಲ್ಲಿಯ ಕಡಿದಾದ ತಿರುವಿನಲ್ಲಿ ನಡೆದಿದೆ.
ಘಟನೆಯ ವಿವರ: ಡಿ.18 ರಂದು ಬಾಗಲಕೋಟೆಯ ಬಸವೇಶ್ವರ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ಸರ್ಕಾರೀ ಬಸ್ಸಿನಲ್ಲಿ ಅಧ್ಯಯನ ಪ್ರವಾಸಕ್ಕೆಂದು ಹೊರಟಿದ್ದರು. ಹುಬ್ಬಳ್ಳಿ ಶಿರ್ಸಿ ಮೊದಲಾದೆಡೆ ಪ್ರಯಾಣಿಸಿ, ಕೊಲ್ಲೂರು ದೇವರ ದರ್ಶನ ಪಡೆದು ಸಂಜೆ ಉಡುಪಿಗೆ ಪ್ರಯಾಣಿಸುತ್ತಿದ್ದರು. ಶುಕ್ರವಾರ ಸಂಜೆ ೬ ಗಂಟೆಗೆ ಶಾರ್ಕೆ ಎಂಬಲ್ಲಿಯ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂಯ್ತರಣ ಕಳೆದುಕೊಂಡ ಬಸ್ ರಸ್ತೆ ಬದಿಯ ಚರಂಡಿಗೆ ಬಿದ್ದು ಪಲ್ಟಿಯಾಗಿ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಶಿಕ್ಷಕ ರವೀಂದ್ರ, ವಿದ್ಯಾರ್ಥಿಗಳಾದ ನಝೀರ್, ಶರಣಬಸವ, ಸಚಿನ್, ಭೀಮಪ್ಪ, ಶಿವು ತುಂಬ್ರಮಟ್ಟಿ, ವಿಠಲ ಎಂಬುವರಿಗೆ ಗಾಯಗಳಾಗಿದ್ದು, ಕುಂದಾಪುರದ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದ ವಿದ್ಯಾರ್ಥಿಗಳನ್ನು ಮಾರಣಕಟ್ಟೆ ದೇವಸ್ಥಾನಕ್ಕೆ ಕಳುಹಿಸಲಾಗಿದ್ದು, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿದ ಕೊಲ್ಲೂರು ಉಪನಿರೀಕ್ಷಕ ಜಯಂತ, ಗಾಯಾಳುಗಳನ್ನು ಸಾಗಿಸಲು ತಮ್ಮದೇ ಇಲಾಖೆಯ ವಾಹನವನ್ನು ನೀಡುವ ಮೂಲಕ ಮಾನವೀಯತೆ ಮೆರದರು. ನಂತರ ತಡವಾಗಿ ಆಗಮಿಸಿದ ೧೦೮ ವಾಹನದಲ್ಲಿ ಉಳಿದ ಗಾಯಾಳುಗಳನ್ನು ಸಾಗಿಸಲಾಯಿತು.
ಶಾಸಕ ಭೇಟಿ: ದುರಂತ ನಡೆದ ಸ್ಥಳಕ್ಕೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲ್ಲೂರು ಹೆಮ್ಮಾಡಿ ರಸ್ತೆಯಲ್ಲಿ ಅಪಾಯಕಾರಿ ತಿರುವುಗಳಿದ್ದು, ಅಪಾಯ ಕಾರಿ ಸ್ಥಳದಲ್ಲಿ ಅಪಾಯದ ಸೂಚನಾ ಫಲಕಗಳನ್ನು ಅಳವಡಿಸುವ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ಶಾಸಕ ಗೋಪಾಲ ಪೂಜಾರಿ ತಿಳಿಸಿದ್ದಾರೆ. ಇದೇ ಸಂದರ್ಭ ಕುಂದಾಪುರದ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಅವರಿಗೆ ದೂರವಾಣಿ ಮೂಲಕ ಸುದ್ಧಿ ಮುಟ್ಟಿಸಿದ ಸ್ಥಳೀಯರು, ಪರ್ಯಾಯ ಬಸ್ ವ್ಯವಸ್ಥೆ ಮಾಡುವಂತೆ ಕೋರಿದ್ದು, ಶನಿವಾರ ಬೇರೆ ಬಸ್ ಮೂಲಕ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.