ಮಂಗಳೂರು:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಯಾಣಿಕ ಳೊಬ್ಬಳನ್ನು ಬಂಧಿಸಿ ಆಕೆಯಿಂದ 16.49 ಲಕ್ಷ ರೂ. ಮೌಲ್ಯದ 749 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಮುಂಬಯಿ ಮೂಲದ ನಝ್ನೀನ್ ಬಾಬು (41) ಬಂಧಿತ ಆರೋಪಿ. ಈಕೆ ದುಬೈಯಿಂದ ಮಂಗಳೂರಿಗೆ ಶುಕ್ರವಾರ ಬೆಳಗ್ಗೆ 8.30ಕ್ಕೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದಿದ್ದಳು. ಆಕೆಯನ್ನು ಕೂಲಂಕಶವಾಗಿ ತಪಾಸಣೆ ನಡೆಸಿದ ಸಂದರ್ಭ ಆಕೆ ಬುರ್ಖಾ ಒಳಗಡೆ ಗಮ್ ಟೇಪ್‌ನಿಂದ ಪ್ಯಾಕ್ ಮಾಡಿದ ಎರಡು ಸಣ್ಣ ಕಟ್ಟನ್ನು ಇಟ್ಟುಕೊಂಡಿದ್ದಳು. ಇದನ್ನು ಬಿಚ್ಚಿದಾಗ ಅದರಲ್ಲಿ ವಿವಿಧ ಮಾದರಿಯ ಚಿನ್ನಾಭರಣಗಳು ಇರುವುದು ಪತ್ತೆಯಾಗಿದೆ.
ಆರೋಪಿ ಮಹಿಳೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.