ಮಂಗಳೂರು, ಡಿ.24: ಜಗತ್ತಿಗೆ ಅದ್ವಿತೀಯ ಕೊಡುಗೆಗಳನ್ನು ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಇತ್ತೀಚಿನ ದಿನಗಳಲ್ಲಿ ಅಶಾಂತಿಯ ವಾತಾವರಣಗಳು ಕಂಡು ಬರುತ್ತಿದೆ. ಇದು ಜಗತ್ತಿಗೆ ತಪ್ಪು ಸಂದೇಶಗಳನ್ನು ಸಾರುವ ಸಾಧ್ಯತೆಯಿದೆ. ಚುನಾವಣೆ ಸಂದರ್ಭ ‘ರಾಜಕೀಯ’ ಮಾಡಿದರೂ ಪರವಾಗಿಲ್ಲ. ಬಳಿಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ರಾಜಕೀಯ ಬದಿಗಿಟ್ಟು ಏಕತೆಗಾಗಿ ಪ್ರಯತ್ನಿಸಬೇಕಾಗಿದೆ. ಆ ಮೂಲಕ ಜಿಲ್ಲೆಯ ಹಳೆಯ ವೈಭವ ಗಳನ್ನು ಮರುಕಳಿಸುವಂತಹ ಕೆಲಸ ಆಗಬೇಕಾಗಿದೆ ಎಂದು ನಿಟ್ಟೆ ವಿ.ವಿ. ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಹೇಳಿದರು.
ನಗರದ ಕರಾವಳಿ ಉತ್ಸವ ಮೈದಾನ ದಲ್ಲಿ ನಡೆಯುವ ದ.ಕ.ಜಿಲ್ಲಾ ಕರಾವಳಿ ಉತ್ಸವಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಇಂದು ಜಿಲ್ಲೆಯಲ್ಲಿ ಹಳೆಯ ವಾತಾವರಣವಿಲ್ಲ. ಎಲ್ಲೆಲ್ಲೂ ದ್ವೇಷದ ವಾತಾವರಣವಿದೆ. ಸಣ್ಣಪುಟ್ಟ ವಿಚಾರಕ್ಕೆ ಜಾತಿ -ಧರ್ಮದ ಹೆಸರಿನಲ್ಲಿ ಸಮಾಜ ವನ್ನು ಒಡೆಯುವ ಕೃತ್ಯ ನಡೆಯುತ್ತಿದೆ. ಸಮಾಜದಲ್ಲಿ ಸೌಹಾರ್ದ ಸೃಷ್ಟಿಸುವ ಸಲುವಾಗಿ ರಾಜಕೀಯ ಮೀರಿದ ಇಚ್ಛಾಶಕ್ತಿ ಪ್ರದರ್ಶಿಸಬೇಕಾ ಗಿದೆ ಎಂದು ಹೆಗ್ಡೆ ತಿಳಿಸಿದರು.
ಕರಾವಳಿ ಉತ್ಸವ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, 1984ರಲ್ಲಿ ಆರಂಭಗೊಂಡ ಕರಾವಳಿ ಉತ್ಸವವು ಇತ್ತೀಚಿನ ದಿನಗಳಲ್ಲಿ ಸೊರಗುತ್ತಿದೆ. ಜಿಲ್ಲೆಯ ಎಲ್ಲಾ ಜನರೂ ತಮ್ಮೆಲ್ಲಾ ಅಭಿಪ್ರಾಯ ಭೇದ ಮರೆತು ಒಗ್ಗೂಡಿ ಕರಾವಳಿ ಉತ್ಸವವನ್ನು ವಿಶಿಷ್ಟವಾಗಿ ಆಚರಿಸಬೇಕಾಗಿದೆ. ಅದ ಕ್ಕಾಗಿ ಸರಕಾರ ಕೂಡ ಇದೇ ಮೊದಲ ಬಾರಿಗೆ 50 ಲಕ್ಷ ರೂ. ಅನುದಾನ ಮಂಜೂರು ಮಾಡಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಜೆ.ಆರ್.ಲೋಬೊ ವಹಿಸಿ ದ್ದರು. ಅತಿಥಿಗಳಾಗಿ ಸಚಿವರಾದ ಯು.ಟಿ.ಖಾದರ್, ಕೆ.ಅಭಯಚಂದ್ರ ಜೈನ್, ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ, ಐವನ್ ಡಿಸೋಜ, ದ.ಕ. ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಮೇಯರ್ ಮಹಾಬಲ ಮಾರ್ಲ, ಉಪಮೇಯರ್ ಕವಿತಾ, ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯ ಪ್ರಭಾ ಗೌಡ, ತುಳು ಸಾಹಿತ್ಯ ಅಕಾಡಮಿಯ
ಅಧ್ಯಕ್ಷೆ ಜಾನಕಿ ಎಂ.ಬ್ರಹ್ಮಾವರ, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಬ್ಯಾರಿ ಸಾಹಿತ್ಯ ಅಕಾಡಮಿ ಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸಿದ್ದರು.
ವೇದಿಕೆಯಲ್ಲಿ ದ.ಕ. ಜಿ.ಪಂ. ಸಿಇಒ ತುಳಸಿ ಮದ್ದಿನೇನಿ, ಪೊಲೀಸ್ ಆಯುಕ್ತ ಆರ್.ಹಿತೇಂದ್ರ, ಜಿಲ್ಲಾ ಎಸ್ಪಿ ಡಾ.ಎಸ್. ಡಿ.ಶರಣಪ್ಪ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಂಗಳೂರು ಸಹಾಯಕ ಆಯುಕ್ತ ಡಾ.ಅಶೋಕ್, ಮನಪಾ ಆಯುಕ್ತ ಗೋಕುಲದಾಸ್ ನಾಯಕ್ ಉಪಸ್ಥಿತರಿದ್ದರು.
ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸ್ವಾಗತಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.