ಕುಂದಾಪುರ: ಅಯ್ಯಪ್ಪ ಮಾಲಧಾರಿಯಾಗಿದ್ದ ವ್ಯಕ್ತಿಯೋರ್ವರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟೇಶ್ವರ ಸಮೀಪದ ಬೀಜಾಡಿಯ ಮೂಡುಕೊಳದ ಸಮೀಪದಲ್ಲಿ ಭಾನುವಾರ ನಡೆದಿದೆ.
ಬೀಜಾಡಿ ದೊಡ್ಡೋಣಿ ರಸ್ತೆಯ ಹೊಸ್ಮನೆ ನಿವಾಸಿ ಪ್ರಕಾಶ ದೇವಾಡಿಗ (29) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.
ಘಟನೆ ವಿವರ: ಕುಂದಾಪುರದ ವಿಠಲ ನೇತ್ರಾಲಯದ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಹಲವು ವರ್ಷಗಳಿಂದ ಕೆಲಸಮಾಡಿಕೊಂಡಿದ್ದ ಪ್ರಕಾಶ ಅವರು ಕಳೆದ ಒಂದು ವಾರಗಳ ಹಿಂದಷ್ಟೇ ಅಯ್ಯಪ್ಪ ಮಾಲೆಯನ್ನು ಧರಿಸಿದ್ದರು. ಡಿ.೩೧ ಬುಧವಾರ ಶಬರಿಮಲೆಯಾತ್ರೆಗೆ ತೆರಳುವವರಿದ್ದ ಇವರು ಶನಿವಾರ ರಾತ್ರಿ ಇತರೇ ಮಾಲೆಧಾರಿಗಳೊಂದಿಗೆ ಮನೆ ಸಮೀಪದಲ್ಲಿಯೇ ಇರುವ ಚಪ್ಪರದಲ್ಲಿ ಮಲಗಿದ್ದರು ಎನ್ನಲಾಗಿದೆ. ತಡರಾತ್ರಿ ೧೨ ಗಂಟೆ ಸುಮಾರಿಗೆ ಮಲಗಿದ್ದಲ್ಲಿಂದ ಎದ್ದು ಹೊರಗಡೆ ಹೋಗಿದ್ದು ಅರ್ಧ ಗಂಟೆಗಳು ಕಳೆದರೂ ವಾಪಾಸ್ಸು ಬಾರದಿದ್ದಾಗ ಮನೆಯವರು ಹಾಗೂ ಸ್ಥಳೀಯರು ಸತತವಾಗಿ ಹುಡುಕಾಟ ನಡೆಸಿದ್ದಾರೆ. ಆದರೇ ಪ್ರಕಾಶ್ ಎಲ್ಲಿಯೂ ಪತ್ತೆಯಾಗಿರಲಿಲ್ಲ.
ಭಾನುವಾರ ಬೆಳಿಗ್ಗೆ ಪ್ರಕಾಶ್ ಅವರ ಮನೆ ಹಾಗೂ ಅಯ್ಯಪ್ಪ ಸ್ವಾಮಿ ಚಪ್ಪರದಿಂದ ಅನತಿ ದೂರದಲ್ಲಿರುವ ಮೂಡುಕೊಳದ ಎಂಬಲ್ಲಿಗೆ ಸ್ಥಳೀಯ ಮಹಿಳೆ ತನ್ನ ಮಗನೊಂದಿಗೆ ದನ ಕಟ್ಟಲು ಬಂದಿದ್ದು ಈ ವೇಳೆ ಕೊಳದ ದಡದಲ್ಲಿರುವ ಮರದಲ್ಲಿ ಶವವೊಂದು ನೇತಾಡುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಸ್ಥಳೀಯರಿಗೆ ಮಾಹಿತಿ ನೀಡಿದ್ದು ಆ ಶವವು ಪ್ರಕಾಶ ಎನ್ನುವರದ್ದು ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ಶರಣಾದ ಪ್ರಕಾಶ ಸ್ಥಳೀಯ ‘ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ’ದಲ್ಲಿ ಸಕ್ರೀಯರಾಗಿದ್ದು, ಉತ್ತಮ ಸಂಘಟಕರಾಗಿದ್ದರು, ಸಾಮಾಜಿಕ ಸೇವೆಗಳಲ್ಲಿ ಮುಂಚೂಣಿಯಲ್ಲಿದ್ದ ಇವರು ಅವಿವಾಹಿತರಾಗಿದ್ದರು. ಅವರಿಗೆ ಸಾಲಾವಾಗಲೀ, ಯಾವುದೇ ದುರಭ್ಯಾಸವೂ ಇರಲಿಲ್ಲ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೇ ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರ ಕಳೆದ ಮೂರ್ನಾಲ್ಕು ತಿಂಗಳಿನಿಂದ ಪ್ರಕಾಶ ಕೊಂಚ ಮೌನಿಯಾಗಿದ್ದು, ಅಷ್ಟಾಗಿ ಯಾರ ಬಳಿಯೂ ಮಾತನಾಡದೇ ತನ್ನ ಪಾಡಿಗೆ ತಾನು ಇರುತ್ತಿದ್ದರು ಎನ್ನಲಾಗಿದೆ. ಮೃತ ಪ್ರಕಾಶ ತಂದೆ ತಾಯಿ, ಮೂವರು ಸಹೋದರರನ್ನು ಅಗಲಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.