ಮಂಗಳೂರು, ಡಿ. 29 : ಕೇಂದ್ರ ಸರಕಾರದ ಮೂಲಕ ಆರೆಸ್ಸೆಸ್ ತನ್ನ ಗುಪ್ತ ಅಜೆಂಡವಾದ ಕೋಮುವಾದ ವನ್ನು ಹೇರಿಕೆ ಮಾಡಲು ಪ್ರಯತ್ನಿಸುತ್ತಿದೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರನ್ನು ಸೋನಿಯಾ ಗಾಂಧಿ ಕೈಗೊಂಬೆ ಎನ್ನುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಆರೆಸ್ಸೆಸ್‌ನ ಕೈಗೊಂಬೆಯಾಗಿದ್ದಾರೆ ಎಂದು ಸಿಪಿಎಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ ಆರೋಪಿಸಿದ್ದಾರೆ. ಮಂಗಳಾದೇವಿಯ ಕುಲಾಲಭವನ ದಲ್ಲಿ ನಡೆದ ದ.ಕ. ಜಿಲ್ಲಾ 21ನೆ ಸಿಪಿಎಂ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಆರೆಸ್ಸೆಸ್ ಮತ್ತು ಸಂಘ ಪರಿವಾರ ದೇಶದ ಏಕತೆ ಹಾಗೂ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟಿದೆ. ಸ್ವಾತಂತ್ರೋತ್ಸವದ ಸಂದರ್ಭ ಕೆಂಪು ಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ ಇನ್ನು 10 ವರ್ಷ ಕೋಮುಗಲಭೆಗೆ ರಜೆ ಎಂದು ಘೋಷಿಸಿದ್ದರು. ಇದರರ್ಥ ಅಲ್ಲಿಯವರೆಗೆ ದೇಶದಲ್ಲಿ ಕೋಮುಗಲಭೆಗೆ ಸಿದ್ಧತೆ ನಡೆಸುತ್ತಾರೆ ಎಂದಂತಾಯಿತು. ಬಹುಧರ್ಮೀಯರಿಗೆ ಸೇರಿದ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಗುಪ್ತ ಅಜೆಂಡವಾಗಿ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ವಾಗಿ ಘೋಷಿಸುವ ಹುನ್ನಾರವೂ ನಡೆಯುತ್ತಿದೆ ಎಂದ ವರು ಟೀಕಿಸಿದರು.
100 ದಿನಗಳಲ್ಲಿ ಕಪ್ಪು ಹಣ ವಾಪಸ್ ತರುವುದಾಗಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಮೋದಿಯಿಂದ ಇದುವರೆಗೆ ಅದು ಸಾಧ್ಯವಾಗಿಲ್ಲ. ಸುಪ್ರೀಂ ಕೋರ್ಟ್ ಕಪ್ಪು ಹಣ ನೀಡಿದವರ ಪಟ್ಟಿ ನೀಡಿ ಎಂದು ಕೇಂದ್ರಕ್ಕೆ ಒತ್ತಡ ಹಾಕದ ಹೊರತು ಪಟ್ಟಿಯನ್ನೂ ಸಲ್ಲಿಸಿರಲಿಲ್ಲ. ಆದರೆ ಸಲ್ಲಿಸಿದ ಪಟ್ಟಿಯಲ್ಲಿರುವವರ ಖಾತೆಯಲ್ಲಿ ಹಣವೇ ಇಲ್ಲ. ಹಾಗಾದರೆ 36 ಲಕ್ಷ ಕೋಟಿ ರೂ. ಕಪ್ಪುಹಣ ಎಲ್ಲಿ ಹೋಗಿದೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಪಟ್ಟಿಯಲ್ಲಿ ಬಿಜೆಪಿಯವರ ಹೆಸರು ಸೇರಿದ ಕಾರಣ ಮೋದಿ ಈಗ ಹಿಂಜರಿಯುತ್ತಿದ್ದಾರೆ ಎಂದು ಶ್ರೀರಾಮ ರೆಡ್ಡಿ ಆಪಾದಿಸಿದರು. ಕಾರ್ಮಿಕರ ಹೋರಾಟ ಹತ್ತಿಕ್ಕುವ ಯತ್ನ ಕೇಂದ್ರದ ಎನ್‌ಡಿಎ ಸರಕಾರ ಕಾರ್ಮಿಕರ ಕಾನೂನಿಗೆ ತಿದ್ದುಪಡಿ ತಂದು ಹೋರಾಟವನ್ನು ಹತ್ತಿಕ್ಕಿ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಮಾಡುವ ಹುನ್ನಾರ ನಡೆಸುತ್ತಿದೆ. ಕಾಂಗ್ರೆಸ್ ಕೂಡಾ ಇದಕ್ಕೆ ಕೈಜೋಡಿಸಿದೆ ಎಂದವರು ಆರೋಪಿಸಿದರು.
ಕಾರ್ಮಿಕರು ಹೋರಾಟ ನಡೆಸಬೇಕಾದರೆ ಕೇಂದ್ರ ಸರಕಾರದ ಪೂರ್ವಾನುಮತಿ ಪಡೆಯಬೇಕು. ಅಲ್ಲದೆ ಕನಿಷ್ಠ 300 ಮಂದಿ ಭಾಗವಹಿಸಬೇಕು ಎಂಬ ತಿದ್ದು ಪಡಿಯ ಮೂಲಕ ಕಾರ್ಮಿಕರ ಹಕ್ಕುಗಳನ್ನೇ ಮೊಟಕು ಗೊಳಿಸುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಹಿರಿಯ ಮುಖಂಡ ಅಬ್ರಹಾಂ ಕಾರ್ಕಡ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಮಂಡಳಿ ಸದಸ್ಯ ವಿ.ಜೆ.ಕೆ.ನಾಯರ್ ಅತಿಥಿಯಾಗಿ ದ್ದರು. ಸಮಿತಿ ಗೌರವಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಅಧ್ಯಕ್ಷ ವಸಂತ ಆಚಾರಿ, ಕೋಶಾಧಿಕಾರಿ ಕೃಷ್ಣಪ್ಪ ಕೊಂಚಾಡಿ, ಮುಖಂಡರಾದ ಬಿ.ಎಂ. ಭಟ್, ಯು.ಬಿ.ಲೋಕಯ್ಯ, ಕೃಷ್ಣಪ್ಪ ಸಾಲ್ಯಾನ್, ಯಾದವ ಶೆಟ್ಟಿ ಹಾಜರಿದ್ದರು. ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು.