ಮಂಗಳೂರು, ಡಿ. 29 : ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ದೈಹಿಕ ವಿಕಲಚೇತನರ ರಾಷ್ಟ್ರೀಯ ಸಂಸ್ಥೆಯ ಸಿಕಂದರಾಬಾದ್‌ನ ದಕ್ಷಿಣ ವಲಯ ಕೇಂದ್ರ ವತಿಯಿಂದ ಜಿಲ್ಲೆಯ 292 ಮಂದಿಗೆ ನಗರದ ತಾಲೂಕು ಪಂಚಾಯತ್ ಆವರಣದಲ್ಲಿ ವಿಕಲಚೇತನರಿಗೆ ಉಚಿತ ಸಾಧನ ಸಲಕರಣೆ ವಿತರಣೆ ಮಾಡಲಾಯಿತು. ದ.ಕ. ಜಿಲ್ಲಾಕಾರಿ ಎ.ಬಿ.ಇಬ್ರಾಹೀಂ ನೇತೃತ್ವದಲ್ಲಿ ನಡೆದ ಸಲಕರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸ ಕರಾದ ಜೆೆ.ಆರ್.ಲೋಬೊ, ಐವನ್ ಡಿಸೋಜ ಭೇಟಿ ನೀಡಿದರು.
ಜಿಲ್ಲಾಡಳಿತ, ಭಾರತೀಯ ರೆಡ್‌ಕ್ರಾಸ್, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ರೋಟರಿ ಕ್ಲಬ್ ಮಂಗಳೂರು, ಎನ್ನೆಸ್ಸೆಸ್ ಸ್ವಯಂಸೇವಕರು ಹಾಗೂ ಮ್ಯಾಪ್ಸ್ ಕಾಲೇಜಿನ ವಿದ್ಯಾರ್ಥಿಗಳ ಸಹಕಾರ ದಲ್ಲಿ ಅಡಿಪ್ ಯೋಜನೆಯಡಿ ಶಿಬಿರವನ್ನು ಆಯೋಜಿಸಲಾಗಿತ್ತು. ಆದಾಯ ಪ್ರಮಾಣ ಪತ್ರ, ದೃಢೀಕೃತ ಜಾತಿ ಪತ್ರ ಪರಿಶೀಲನೆ, ದಾಖಲೆ ಪರಿಶೀಲನೆ, ಟೋಕನ್ ವಿತರಣೆ ಬಳಿಕ ತ್ರಿಚಕ್ರ ಬೈಸಿಕಲ್ 5, ಗಾಲಿಕುರ್ಚಿ 20, ಎಂಟು ಜೊತೆ ಕಂಕುಳ ಕೋಲು, ನಾಲ್ಕು ಎಲ್ಬೋ ಕಂಚಸ್, ಆರು ನಡಿಗೆ ಕೋಲು, 47 ಅಂಧರ ಬಿಳಿಕೋಲು, 36 ಬ್ರೈಲ್ ಸ್ಲೇಟ್, 72 ಕೃತಕ ಅವಯವಗಳು, ವಿಶೇಷ ಮಕ್ಕಳಿಗೆ 40 ಎಂಆರ್ ಕಿಟ್, 54 ಶ್ರವಣ ಸಾಧನ ವಿತರಿಸಲಾಯಿತು ಎಂದು ಕಾರ್ಯಕ್ರಮ ಸಂಯೋಜಕ ಯೋಗೀಶ್ ಡಿ.ಕೆ. ಮಾಹಿತಿ ನೀಡಿದರು.
426 ಮಂದಿಯಲ್ಲಿ 292 ಮಂದಿಗೆ ಸಲಕರಣೆಗಳನ್ನು ವಿತರಿಸಿದ್ದು, 134 ಮಂದಿ ಹಾಜರಾಗದ ಕಾರಣ ವಿತರಿಸಿಲ್ಲ. ಅದನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಗುತ್ತದೆ. ಜ.24ರಂದು ಮಂಗಳೂರಿನಲ್ಲಿ ಸೌಲಭ್ಯ ಪಡೆಯಲು ಅಳತೆ ನೀಡಿದವರು ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿ, ಆದಷ್ಟು ಬೇಗ ಸಲಕರಣೆಗಳನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ದೈಹಿಕ ವಿಕಲಚೇತನರ ರಾಷ್ಟ್ರೀಯ ಸಂಸ್ಥೆ ಮುಖ್ಯಸ್ಥ ಡಾ.ಜಿ.ಪಾಂಡ್ಯನ್, ಸಹಾಯಕ ಆಯುಕ್ತ ಡಾ.ಅಶೋಕ್, ರೆಡ್‌ಕ್ರಾಸ್ ಜಿಲ್ಲಾಧ್ಯಕ್ಷ ಪ್ರಭಾಕರ ಶ್ರೀಯಾನ್, ಜಿಲ್ಲಾ ಪ್ರಭಾರ ವಿಕಲಚೇತನರ ಕಲ್ಯಾಣಾಕಾರಿ ಚಂದ್ರಿಕಾ ನಾಯಕ್, ಡಾ.ನವೀನ್‌ಚಂದ್ರ ಮತ್ತಿತರರು ಉಪಸ್ಥಿತರಿದ್ದರು.