ಕನ್ನಡ ವಾರ್ತೆಗಳು

ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಯುವಕರ ಪಾತ್ರ ಅಗತ್ಯ: ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ

Pinterest LinkedIn Tumblr

ಕುಂದಾಪುರ: ಅಂದು ಪ್ರಜಾಪ್ರಭುತ್ವವೆಂದರೇ ಜನರಿಂದ ಜನರಿಗಾಗಿ ಜನರೇ ಮಾಡುವ ಸರಕಾರವಾಗಿತ್ತು. ಆದರೇ ಇಂದು ಕೆಲವರಿಂದ ಕೆಲವರಿಗಾಗಿ ಕೆಲವರೇ ಮಾಡುವ ಸರಕಾರವಾಗಿ ಮಾರ್ಪಟ್ಟಿದ್ದು ಇದನ್ನು ಬದಲಾಯಿಸುವ ಪ್ರಯತ್ನವಾಗಬೇಕು. ಜನರಿಗೆ ಉತ್ತಮ ದಾರಿ ತೋರಿಸುವ ಸಲುವಾಗಿ ಸರಕಾರ ಎಂಬ ಸಂಸ್ಥೆಯಿತ್ತು ಆದರೇ ಇಂದು ಅದರಿಂದಲೇ ಜನರಿಗೆ ಅನ್ಯಾಯವಾಗುತ್ತಿದ್ದು, ಎಲ್ಲೆಡೆ ಭ್ರಷ್ಟಾಚಾರ ತಾಂಡವಾಡುತ್ತಿದೆ, ಇದರ ಬದಲಾವಣೆಗೆ ಯುವಕರು ಕಠಿಬದ್ಧರಾಗಬೇಕು, ಯುವಜನಾಂಗ ಎಚ್ಚೆತ್ತಾಗ ಮಾತ್ರವೇ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಅವರು ಭಾನುವಾರ ಸಂಜೆ ಕೊಳ್ಕೇರೆ ರತ್ನಾಕರ ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ.) ಇದರ ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಬಸ್ರೂರು ಇಲ್ಲಿನ ದಶಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಲೆಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

Santhosh Hegde_Visit-Basruru Santhosh Hegde_Visit-Basruru (3) Santhosh Hegde_Visit-Basruru (6) Santhosh Hegde_Visit-Basruru (4) Santhosh Hegde_Visit-Basruru (5) Santhosh Hegde_Visit-Basruru (2) Santhosh Hegde_Visit-Basruru (1)

ಇಂದಿನ ಸಮಾಜ ಜನರಿಗೆ ಮಾದರಿಯಾಗುವ ಬದಲಾಗಿ ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸಲು ಹೊರಟಿದೆ, ಪ್ರಾಮಾಣಿಕತೆಗೆ ಬೆಲೆಯಿಲ್ಲದ ಕಾಲ ಸೃಷ್ಟಿಯಾಗಿದೆ. ನಮ್ಮ ಹಿರಿಯರೇ ಈ ವ್ಯವಸ್ಥೆ ನಿರ್ಮಾಣ ಮಾಡಿದ್ದು ಆದ್ದರಿಂದ ಇದನ್ನು ಸರಿಪಡಿಸಲು ಸಮಕಾಲೀನರಿಂದ ಅಸಾಧ್ಯ, ಬದಲಾಗಿ ಸಮಾಜದ ಯುವಕರು ಈ ಬಗ್ಗೆ ಚಿಂತನೆ ಮಾಡಬೇಕಾದ ಅಗತ್ಯವಿದ್ದು ಯುವಕರಲ್ಲಿ ಸಮಾಜದ ಬಗ್ಗೆ ಉತ್ತಮ ಭಾವನೆ ಮೂಡಿಸುವ ಕಾರ್ಯವಾಗಬೇಕಿದೆ ಎಂದ ಅವರು, ಲೋಕಾಯುಕ್ತನಾಗಿ ಸೇವೆ ಸಲ್ಲಿಸಿದ ಬಳಿಕ ಈ ಸಮಾಜದ ಆಗುಹೋಗುಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗಿದೆ, ಸಮಾಜದ ಬದಲಾವಣೆಗಾಗಿ ಯುವಕರಲ್ಲಿ ಸ್ಪೂರ್ತಿ ತುಂಬಲು ಸುಮರು ೭೫೦ಕ್ಕೂ ಅಧಿಕ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಸಂವಾದ ನಡೆಸಿದ್ದೇನೆಂದರು.

ದುರಾಸೆ ಹಾಗೂ ಮಾನವೀಯ ಮೌಲ್ಯಗಳ ಕೊರತೆಯಿಂದಾಗಿ ಸಂವಿಧಾನದಲ್ಲಿ ತಯಾರಿಸಿದ ರಾಜ್ಯಾಂಗ, ನ್ಯಾಯಾಂಗ, ಶಾಸಕಾಂಗ ಮೂರು ವಿಫಲಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಇದನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಪ್ರಜಾಪ್ರಭುತ್ವ ಉಳಿಯದು ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕುಂದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಚಿತ್ರ ನಿರ್ದೇಶಕ ರವಿ ಬಸ್ರೂರು, ಪತ್ರಕರ್ತ ಜಾನ್ ಡಿಸೋಜಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಸ್ರೂರು ಶ್ರೀ ಶಾರದಾ ಆಂಗ್ಲಮಾಧ್ಯಮ ಶಾಲೆಯ ಆಡಳಿತ ವ್ಯವಸ್ಥಾಪಕ (ಕರೆಸ್ಫಾಂಡೆಂಟ್) ಅರುಣ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಶಾಲೆ ಬೆಳೆದು ಬಂದ ಹಾದಿಬಗ್ಗೆ ವಿವರಿಸಿದರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೆಂಗಳೂರು ಉಚ್ಚನ್ಯಾಯಾಲಯದ ನ್ಯಾಯವಾದಿ ಕೆ.ಜಿ. ಸದಾಶಿವಯ್ಯ, ನಿವೃತ್ತ ಉಪತಹಶಿಲ್ದಾರ್ ರಘುರಾಮ್ ಶೆಟ್ಟಿ, ಉದ್ಯಮಿ ಪ್ರಶಾಂತ್ ತೋಳಾರ್, ಶಾಲಿನಿ ಬಿ. ಶೆಟ್ಟಿ, ಮೌಸೆಸ್ ಮನೋಹರ್ ಮೊದಲಾದವರಿದ್ದರು.

ಶಾಲೆಯ ಪ್ರಾಂಶುಪಾಲೆ ವಿಲ್ಮಾ ಡಿ’ಸಿಲ್ವಾ ವರದಿ ವಾಚಿಸಿದರು, ಬೇಳೂರು ರಾಘವೇಂದ್ರ ಶೆಟ್ಟಿ ಸ್ವಾಗತಿಸಿದರು.

ಇಂದು ಜನರು ತೃಪ್ತಿ ಪದದ ಅರ್ಥ ಮರೆತಿದ್ದಾರೆ, ತೃಪ್ತಿಯ ಗುಣವಿರುವಾತ ಮಾತ್ರ ಮನುಷ್ಯನಾಗಲು ಸಾಧ್ಯ. ಆಸೆ ಎಲ್ಲರಿಗೂ ಇರಬೇಕು, ಆಸೆಯೆನ್ನುವುದು ಅತಿಯಾಸೆಗೆ ಅದು ತಿರುಗಿದಾಗ ಜಾಗೃತಿ ಮೂಡಬೇಕು ಹಾಗೂ ಎಚ್ಚೆತ್ತುಕೊಳ್ಳಬೇಕು, ಅತಿಯಾಸೆ ದುರಾಸೆಯಾದರೇ ಆತ ತನ್ನ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾನೆ.
– ಸಂತೋಷ್ ಹೆಗ್ಡೆ

Write A Comment