ಮಂಗಳೂರು,ಡಿ.೩೦ : ಪಣಂಬೂರಿನಿಂದ ಕುಳಾಯಿವರೆಗೆ ರಸ್ತೆ ತಡೆಯಾದ ಕಾರಣ ಟೈಮ್ ಹೊಂದಾಣಿಕೆ ಭರಾಟೆಯಲ್ಲಿ ಒನ್‍ವೇ ರಸ್ತೆಯಲ್ಲಿ ಚಲಿಸಿದ ಎಕ್ಸ್‍ಪ್ರೆಸ್ ಬಸ್ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬಡಿದಿದ್ದು, ಗಂಭೀರ ಗಾಯಗಳಾದ ಪಾದಚಾರಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ ಘಟನೆ ನಿನ್ನೆ ಪೂರ್ವಾಹ್ನ ಬೈಕಂಪಾಡಿ ಬಳಿ ಸಂಭವಿಸಿದೆ. ಹರ್ಷ ಸರ್ಫಂಗಳ ಎಂಬ ವೈದ್ಯಕೀಯ ವಿದ್ಯಾರ್ಥಿಯೇ ಅಪಘಾತಕ್ಕೊಳಗಾದ ನತದೃಷ್ಟ.
ನಗರದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಕೇರಳ ಮೂಲದ ಹರ್ಷ ನಿನ್ನೆ ಮಧ್ಯಾಹ್ನ ರಸ್ತೆ ದಾಟುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಲಾರಿಗಳ ಅಡ್ಡಾದಿಡ್ಡಿ ಓಡಾಟ ಹಾಗೂ ಇನ್ನೂ ಪೂರ್ಣಗೊಳ್ಳದ ಬೈಕಂಪಾಡಿ ಹೈವೇ ಕಾಮಗಾರಿಯ ಕಾರಣದಿಂದಾಗಿ ಪಣಂಬೂರಿನಿಂದ ಹೊನ್ನಕಟ್ಟೆ, ಕುಳಾಯಿವರೆಗೆ ಪ್ರತೀ ದಿನವೂ ರಸ್ತೆ ತಡೆಯಾಗುತ್ತಿದ್ದು, ನಿನ್ನೆಯೂ ಇದೇ ರೀತಿ ರಸ್ತೆ ಬ್ಲಾಕ್ ಆಗಿತ್ತು. ಈ ಸಂದರ್ಭ ನಿಗದಿತ ಸಮಯಕ್ಕಾಗಿ ಅವಸರಿಸಿದ ಕೊಲ್ಲೂರಿನಿಂದ ಮಂಗಳೂರಿನತ್ತ ಚಲಿಸುತ್ತಿದ್ದ ಎಪಿಎಂ ಎಂಬ ಎಕ್ಸ್‍ಪ್ರೆಸ್‍ನ ಚಾಲಕ ಬೈಕಂಪಾಡಿ ಬಳಿ ಒನ್‍ವೇ ರಸ್ತೆಯಲ್ಲಿ ಚಲಾಯಿಸಿದ್ದು, ಈ ಸಂದರ್ಭ ಹರ್ಷಗೆ ವೇಗವಾಗಿ ಬಡಿದಿದೆ. ಅಪಘಾತದ ರಭಸಕ್ಕೆ ಹರ್ಷ ಅಷ್ಟು ದೂರ ಹಾರಿ ಬಿದ್ದರೆ, ಬಸ್ಸಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಡೆದ ಸ್ಥಳದಲ್ಲಿ ಗುಂಪುಗೂಡಿದ್ದ ಸ್ಥಳೀಯರು ಉದ್ರಿಕ್ತರಾಗಿದ್ದರು. ಆಕ್ರೋಶಿತರಾದ ಕೆಲವರು ಸ್ಥಳಕ್ಕೆ ಬಸ್ ಚಾಲಕ ಅಥವಾ ಮಾಲಕ ಆಗಮಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದು ಕೆಲ ಸಮಯದ ನಂತರ ವಾತಾವರಣ ತಿಳಿಯಾಯಿತು. ಅಪಘಾತದಿಂದ ಗಂಭೀರ ಗಾಯಗಳಾದ ಹರ್ಷರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿಗಳ ಅಡ್ಡಾದಿಡ್ಡಿ ಓಡಾಟಕ್ಕೆ ದಿನನಿತ್ಯವೂ ಇಲ್ಲಿ ತಡೆ : ಒಂದು ಕಡೆ ಇನ್ನೂ ಪೂರ್ಣಗೊಳ್ಳದ ಓವರ್ ಬ್ರಿಡ್ಜ್ ಹೈವೇ ಕಾಮಗಾರಿ, ಮತ್ತೊಂದೆಡೆ ಲೋಡ್ ಲಾರಿಗಳು ಸ್ಕೇಲ್‍ಗಾಗಿ ಅಡ್ಡಾದಿಡ್ಡಿ ಓಡಾಡುವುದೇ ಬೈಕಂಪಾಡಿ ಬಳಿ ರಸ್ತೆ ಬ್ಲಾಕ್ ಆಗಲು ಕಾರಣ ಎನ್ನಲಾಗುತ್ತಿದೆ. ಲೋಡ್ ಆದ ಲಾರಿಗಳು ಎನ್‍ಎಂಪಿಟಿ ಒಳಗೆ ಹೋಗಲು ಹೊರಗಿನಿಂದ ಸ್ಕೇಲ್ ಮಾಡಿಕೊಂಡು ಬರಬೇಕಾಗಿರುವುದೇ ಇಷ್ಟಕ್ಕೆಲ್ಲಾ ಕಾರಣ ಎನ್ನಲಾಗುತ್ತಿದೆ.