ಮಂಗಳೂರು : ಚಾಲಕನ ನಿಯಂತ್ರಣ ಕಳೆದುಕೊಂಡ ಟಿಪ್ಪರ್ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಉಜ್ಜೋಡಿಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಪಾಂಡೇಶ್ವರದಲ್ಲಿ ವಾಸ್ತವ್ಯ ಹೊಂದಿರುವ ಕೋಟೆಕಾರ್ ಬೀರಿಯ ನಿವಾಸಿ ಲತೀಶ್ ಕುಮಾರ್ (29) ಎಂದು ಗುರುತಿಸಲಾಗಿದೆ.
ಪಂಪ್ ವೆಲ್‍ನಿಂದ ಗೋರಿಗುಡ್ಡೆಗೆ ಹೋಗುವ ದಾರಿಯ ಉಜ್ಜೋಡಿ ಬಳಿಯಲ್ಲಿ ಲತೀಶ್ ತನ್ನ ಬೈಕ್ ನಿಲ್ಲಿಸಿ ಬೈಕ್ ನಲ್ಲಿ ಕುಳಿತ್ತಿದ್ದಾಗ ಹಿಂದಿನಿಂದ ಅತೀವೇಗವಾಗಿ ಬಂದ ಟಿಪ್ಪರ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಗಂಭೀರ ಗಾಯಗೊಂಡ ಲತೀಶ್‌ನನ್ನು ಆಸ್ಪತ್ರೆಗೆ ದಾಖಲಿಸಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ ಎನ್ನಲಾಗಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಮಾರ್ಕೇಟಿಂಗ್ ಏಜೆಂಟ್ ಆಗಿರುವ ಲತೀಶ್ ವಿವಾಹಿತನಾಗಿದ್ದು, ಈತನ ಪತ್ನಿ ತುಂಬು ಗರ್ಭಿಣಿ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಚಾಲಕನ ನಿಯಂತ್ರಣ ಕಳೆದುಕೊಂಡ ಟ್ಟಿಪ್ಪರ್ ಲಾರಿ ಅಲ್ಲೆ ಮುಂದೆ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಮತ್ತಷ್ಟು ಮುಂದೆ ಸಾಗಿ ಅಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತಕ್ಕೀಡಾದ ಟ್ಟಿಪ್ಪರ್ ಲಾರಿ ನವಯುಗ ಇಂಜಿನೀಯರ್ ಕಂಪೆನಿಗೆ ಸೇರಿದ್ದು ಎನ್ನಲಾಗಿದೆ.
ಟಿಪ್ಪರ್ ಲಾರಿಯ ಚಾಲಕನ ಅತೀ ವೇಗದ ಚಾಲನೆ ಹಾಗೂ ನಿರ್ಲಕ್ಷ್ಯದಿಂದ ಈ ಸರಣಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.