ಕುಂದಾಪುರ: ಉಡುಪಿ ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ಅವರು ಕುಂಭಾಸಿ ಕೊರಗ ಕಾಲನಿಗೆ ಭೇಟಿ ನೀಡಿ ಕೊರಗ ಮುಖಂಡರು ಹಾಗೂ ಕೊರಗ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದರು.
ಕೊರಗ ಕಾಲನಿಗೆ ಭೇಟಿ ನೀಡಿದ ಸಂದರ್ಭ ಅಲ್ಲಿನ ನಿವಾಸಿಗಳ ಬಳಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಕುರಿತು ಚರ್ಚಿಸಿದರು. ಕೊರಗ ಕಾಲನಿಯಲ್ಲಿರುವ ಮನೆಗಳಿಗೆ ಹಕ್ಕುಪತ್ರ ಈವರೆಗೂ ಸಿಗದಿದ್ದು, ಇಕ್ದಕ್ಕಾಗಿ ಗ್ರಾಮಪಂಚಾಯತ್ ಮಟ್ಟದಿಂದಲೇ ಅದಕ್ಕೆ ಪೂರಕಾವದ ದಾಖಲೆಗಳನ್ನು ಒದಗಿಸಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರಸ್ತಾವನೆ ನೀಡಬೇಕು, ಬಳಿಕ ಅವರು ಆ ಪ್ರಸ್ತಾವನೆಯನ್ನು ತಹಶಿಲ್ದಾರ್ ಮೂಲಕವಾಗಿ ಜಿಲ್ಲಾಡಳಿತಕ್ಕೆ ನೀಡುತ್ತಾರೆ, ಈ ಮೂಲಕ ಹಕ್ಕುಪತ್ರ ಪಡೆಯಲು ಸುಲಭದ ದಾರಿಯಾಗಿದ್ದು, ಈ ಕಾರ್ಯವನ್ನು ಸ್ಥಳೀಯ ಕುಂಭಾಸಿ ಪಂಚಾಯತ್ ಕೂಡಲೇ ನಿರ್ವಹಿಸುವ ಮೂಲಕ ಕೊರಗ ನಿವಾಸಿಗಳಿಗೆ ಹಕ್ಕುಪತ್ರ ದೊರಕುವಂತೆ ಮಾಡಬೇಕು ಎಂದು ಆದೇಶಿಸಿದರು.
ಅಲ್ಲದೇ ಕೊರಗ ಕಾಲನಿ ಪ್ರದೇಶದಲ್ಲಿ ಅಳವಡಿಸಲಾದ ಸೋಲಾರ್ ದೀಪ ನಿಷ್ಕ್ರೀಯಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾ.ಪಂ. ಕಾರ್ಯದರ್ಶಿಯವರೊಂದಿಗೆ ಮಾತನಾಡಿ, ಕೂಡಲೇ ಸೋಲಾರ್ ದೀಪದ ದುರಸ್ಥಿ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಮಕ್ಕಳ ಮನೆ ಭೇಟಿ: ಇದೇ ಸಂದರ್ಭ ಕುಂಭಾಸಿ ಮಕ್ಕಳ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸ್ಥಳಿಯ ಮುಖಂಡರೊಂದಿಗೆ ಇಲ್ಲಿಗೆ ಬೇಕಾದ ಅಗತ್ಯತೆಗಳ ಕುರಿತು ಚರ್ಚಿಸಿದರು. ಮಕ್ಕಳ ಮನೆಯಲ್ಲಿನ ವಿಶ್ರಾಂತಿ ಕೋಣೆ, ಉಗ್ರಾಣ, ನೀರಿನ ವ್ಯವಸ್ಥೆ ಮೊದಲಾದ ಸೌಕರ್ಯಗಳನ್ನು ನೋಡಿ ಮೆಚ್ಚುಗೆ ಸೂಚಿಸಿದ ಅವರು ವಿದ್ಯುತ್ ಕಡಿತದ ಸಂದರ್ಭದಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಯು.ಪಿ.ಎಸ್. (ಇನ್‌ವರ್ಟರ್) ಖರೀದಿಗಾಗಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆಯನ್ನು ಶೀಘ್ರ ಸಲ್ಲಿಸುವಂತೆ ಹೇಳಿದ ಅವರು ಆ ಬಳಿಕ ಮಕ್ಕಳ ಮನೆಗೆ ಯು.ಪಿ.ಎಸ್. ಒದಗಿಸುವ ಭರವಸೆಯನ್ನು ನೀಡಿದರು.
ಕುಂಭಾಸಿ ಶಾಲೆಗೆ ಭೇಟಿ: ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಅಲ್ಲಿನ ಮಕ್ಕಳ ಪಾಠ-ಪ್ರವಚನಗಳನ್ನು ವೀಕ್ಷಿಸಿದರು.
ಈ ಸಂದರ್ಭ ಐಟಿಡಿಪಿ ಅಧಿಕಾರಿ ಎಚ್.ಎಸ್. ಪ್ರೇಮನಾಥ್, ಕುಂಭಾಸಿ ಗ್ರಾ.ಪಂ. ಕಾರ್ಯದರ್ಶಿ ನೀಲು, ಕೊರಗ ಮುಖಂಡರಾದ ಗಣೇಶ್ ಕುಂದಾಪುರ, ಗಣೇಶ್ ಬಾರ್ಕೂರು ಮೊದಲಾದವರಿದ್ದರು.