ಬೆಂಗಳೂರು,ಜ.17: ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಜತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಭಟ್ಕಳ ಮೂಲದ ಶಂಕಿತ ಉಗ್ರನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.ಕಳೆದ ವಾರ ಬಂಧಿತರಾಗಿರುವ ಭಟ್ಕಳ ಮೂಲದ ಉಗ್ರರು ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿನ ಸಿಸಿಬಿ ಪೊಲೀಸರು ಭಟ್ಕಳದಿಂದ ಬೆಂಗಳೂರಿಗೆ ಬಂಧಿದ್ದ ಮತ್ತೊಬ್ಬ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ.
ಈಗಾಗಲೇ ಬಂಧಿತ ಡಾ ಅಫರ್ ಇಸ್ಮಾಯಿಲ್, ಸದ್ದಾಂ ಹುಸೇನ್, ಅಬ್ದುಸ್ ಸಬೂರ್ ಹಾಗೂ ರಿಯಾಜ್ ಸೈಯಿದಿ ಜತೆ ಶುಕ್ರವಾರ ವಶಕ್ಕೆ ಪಡೆದಿರುವ ವ್ಯಕ್ತಿ ಹೊಂದಿರುವ ನಂಟಿನ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಆತನ ಹೆಸರು ಮತ್ತು ಇತರೆ ಮಾಹಿತಿಗಳ ಗೌಪ್ಯತೆ ಕಾಪಾಡಲಾಗಿದೆ.
ಒಂದು ವೇಳೆ ಸ್ಫೋಟಕ ಪತ್ತೆ ಪ್ರಕರಣಗಳಲ್ಲಿ ಅವರ ಪಾತ್ರ ಇಲ್ಲ ಎಂದಾದಲ್ಲಿ ಅವರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ತಿಳಿಸಿದ್ದಾರೆ.