ಮಂಗಳೂರು,ಜ.17 : ಸಾರ್ವಜನಿಕರ ಸೇವೆಗೆ ಚುನಾಯಿತರಾದ ಜನಪ್ರತಿನಿಧಿಗಳಿಗೆ ವಿವಿಧ ಇಲಾಖೆಗಳಲ್ಲಿನ ಜನ ಕಲ್ಯಾಣ ಯೋಜನೆಗಳ ಅರಿವು ಇರಬೇಕು ಹಾಗೂ ಈ ಎಲ್ಲಾ ಯೋಜನೆಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ಉತ್ಕೃಷ್ಟವಾದ ತರಬೇತಿ ಅಗತ್ಯವಾಗಿದೆ ಎಂದು ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಅವರು ಶನಿವಾರ ಮಂಗಳೂರು ತಾಲೂಕು ಅರ್ಕುಳ ಗ್ರಾಮದ ಬಂಗ್ಲೆ ಗುಡ್ಡೆಯಲ್ಲಿ ರಾಜೀವಗಾಂಧಿ ಪಂಚಾಯತಿ ಸಶಕ್ತೀಕರಣ ಅಭಿಯಾನ ಯೋಜನೆಯಡಿ ರೂ.150 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ತರಬೇತಿ ಜನಪ್ರತಿನಿಧಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸಿ ಅವರು ಇನ್ನೂ ಹೆಚ್ಚು ಸಾರ್ವಜನಿಕ ಸೇವೆಯನ್ನು ಮಾಡಲು ನೆರವಾಗುತ್ತದೆ ಎಂದು ಸಚಿವರು ತಿಳಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ,ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ ಅವರು ಮಾತನಾಡಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ವೈ.ಎನ್.ಶೇಷಾದ್ರಿ ಮಾತನಾಡಿ ಇಲ್ಲಿ ನಿರ್ಮಾಣವಾಗಲಿರುವ ಸಂಪನ್ಮೂಲ ಕೇಂದ್ರ 7500 ಚದರ ಅಡಿಗಳಷ್ಟು ಇರಲಿದ್ದು,ಗ್ರಂಥಾಲಯ,ಗಣಕಯಂತ್ರ ತರಬೇತಿ ಸೇರಿದಂತೆತರಬೇತಿ ವಿಭಾಗಗಳನ್ನು ಹೊಂದಿರುತ್ತದೆ. 20 ಪುರುಷ ಹಾಗೂ 20 ಮಹಿಳಾ ಶಿಬಿರಾರ್ಥಿಗಳಿಗೆ ತರಬೇತಿ ನೀಡಲು ಹಾಗೂ ಅವರಿಗೆ ಪ್ರತ್ಯೇಕ ವಸತಿಯನ್ನು ಸಲ್ಲಿಸಲಾಗುತ್ತಿದ್ದು,ಅಡುಗೆ ಮನೆ ,ಡೈನಿಂಗ್ ಹಾಲ್ ಹೊಂದಲಿದೆ ಎಂದು ತಿಳಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈಗಾಗಲೇ ಒಟ್ಟು 100 ಲಕ್ಷ ರೂ.ಅನುದಾನ ಬಿಡುಗಡೆ ಮಾಡಿದ್ದು 2015 ರ ಡಿಸೆಂಬರ್ ಅಂತ್ಯಕ್ಕೆ ಕಟ್ಟಡ ಮುಗಿಸುವ ಭರವಸೆ ನೀಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ,ಉಪಕಾರ್ಯದರ್ಶಿ ಉಮೇಶ್,ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕರಿ ವಿಶ್ವನಾಥ ಪೂಜಾರಿ ,ಕೆಆರ್ ಐಡಿಎಲ್ ಸಹಯಕ ಕಾರ್ಯ ನಿರ್ವಾಹಕ ಅಭಿಯಂತರ ಎಂ.ರವಿ,ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮಿ ,ತಾಲೂಕು ಪಂಚಾಯತ್ ಸದಸ್ಯ ಗೀತಾಕೇಶವ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊದಿನ್ ಬಾವಾಜಿಲ್ಲಾ ಪಂಚಾಯತ್ ಸದಸ್ಯ ಮೆಲ್ವಿನ್ ಡಿ ಸೋಜಾ ಮುಂತಾದವರು ವಹಿಸಿದ್ದರು.