ಕುಂದಾಪುರ: ಸಂತ ಜೋಸೆಫ್ ವಾಜ್ ಏಸು ಕ್ರಿಸ್ತನ ಪ್ರತಿರೂಪ. ಹಲವು ಅದ್ಭುತಗಳಿಗೆ ಕಾರಣೀಕರ್ತರಾಗಿದ್ದ ಜೋಸೆಫ್ ವಾಜ್, ಕೇವಲ ಧರ್ನಗುರು ಆಗಿರಲಿಲ್ಲ. ಅವರೊಬ್ಬ ಸಂತ; ದೈವಾಂಶಸಂಭೂತರಾಗಿದ್ದರು. ಮುನ್ನೂರು ವರ್ಷಗಳ ಹಿಂದೆಯೇ ಕರಾವಳಿಯುದ್ದಕ್ಕೂ ಸಂಚರಿಸುವ ಮೂಲಕ ಕರಾವಳಿಯನ್ನು ಪಾವನ ಕ್ಷೇತ್ರವನ್ನಾಗಿ ಮಾಡಿದ ಮಹಾನುಭಾವ. ಅವರು ಮಾಡಿದ ಪವಾಡಗಳಿಗೆ ಜಗತ್ತಿನಾದ್ಯಂತ ಊದಾಹರಣೆ ದೊರೆಯುತ್ತದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ, ಪ್ರಧಾನ ಧರ್ಮಗುರು ಡಾ. ಜೆರಾಲ್ಡ್ ಐಸಾಕ್ ಲೋಬೋ ಹೇಳಿದರು.
ಭಾನುವಾರ ಸಂಜೆ ಕುಂದಾಪುರದ ಹೋಲಿ ರೋಜರಿ ಇಗರ್ಜಿಯಲ್ಲಿ ನಡೆದ ಏಷ್ಯಾದ ಮಿಶೊನರಿ ಶ್ರೀಲಂಕಾದ ಪ್ರೇಶಿತರು ಕರಾವಳಿಯ ರಾಯಭಾರಿ ಹಾಗೂ ಗೋವಾದ ನಕ್ಷತ್ರ ಮುಕ್ತೀಧರ ಜೋಸೆಫ್ ವಾಝ್‌ರವರ ಸಂತ ಘೋಷಣೆಯ ಚಾರಿತ್ರಿಕ ಸಂಭ್ರಮದ ನೇತೃತ್ವ ವಹಿಸಿ ದಿವ್ಯ ಬಲಿ ಪೂಜೆ ಕಾರ್ಯಕ್ರಮದ ನಂತರ ಪ್ರವಚನ ನೀಡಿದರು.
ಕ್ರಿ.ಶ. 1651ರ ಎಪ್ರಿಲ್ 21 ರಂದು ಗೋವಾದ ಕ್ರಿಸ್ಟೋಫರ್ ವಾಝ್ ಹಾಗೂ ಮಾರಿಯಾ ಮಿರಾಂದಾರವರ ಧರ್ಮಭೀರು ಕುಟುಂಬದಲ್ಲಿ ಜೋಸೆಫ್ ವಾಜ್‌ರ ಜನಿಸಿದ ಜೋಸೆಫ್ ವಾಜ್, ಗುರುಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದು ತನ್ನ 25vನೇ ವಯಸ್ಸಿನಲ್ಲಿ ಧರ್ಮಗುರುಗಳಾದವರು. ಕ್ರಿ.ಶ. 1681 ರಲ್ಲಿ ಬರಿಗಾಲಿನಲ್ಲಿಯೇ ಸಂಚರಿಸಿದ ಅವರು, ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಧ್ಯಾನಾಸಕ್ತರಾಗಿ ಅವರು ನೆಲದಿಂದ ಮೇಲಕ್ಕೆತ್ತಲ್ಪಟ್ಟು ಗಾಳಿಯಲ್ಲಿ ತೇಲುತ್ತಿದ್ದರೆಂಬ ಬಗ್ಗೆ ಚರಿತ್ರೆಯಲ್ಲಿ ದಾಖಲಿಸಲ್ಪಟ್ಟಿದೆ ಎಂದರು.
ಮಂಗಳೂರಿನ ಪನ್ನೀರ್ ಇಗರ್ಜಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಬಂಟ್ವಾಳ ತಾಲೂಕಿನ ಮುಡಿಪುವಿನಲ್ಲಿ ಕಾರ್ಗತ್ತಲ ರಾತ್ರಿಯಲ್ಲಿ ಮಿಂಚು ಕೋರೈಸಿ ಮೂರು ನೀರಿನ ಬುಗ್ಗೆಗಳು ಚಿಮ್ಮಿದ ಘಟನೆ ಇಂದಿಗೂ ದಾಖಲೆಯಾಗಿಯೇ ಉಳಿದುಕೊಂಡಿದೆ. ಕೂಲಿಯಾಳುಗಳ ವೇಷದಲ್ಲಿ ತನ್ನ ಸೇವಕ ಜೋನ್ ಜೊತೆ ಶ್ರೀಲಂಕಾಗೆ ತೆರಳಿ ಅಲ್ಲಿ ಗುಪ್ತವಾಗಿ ಜೀವಿಸುತ್ತಿದ್ದ ಕೆಥೋಲಿಕ್ ಕ್ರೈಸ್ತ ಬಂಧುಗಳನ್ನು ಭೇಟಿಯಾಗಿ ಅವರ ಆಧ್ಯಾತ್ಮಿಕ ಸೇವೆಗೆ ನೆರವಾದ ಸಂದರ್ಭ ಅವರೊಬ್ಬ ಗೂಢಾಚಾರರೆಂದು ಬಂಧಿಸಿ ಸೆರೆಮನೆವಾಸ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಬರಗಾಲ ಬಂದಾಗ ಮಳೆ ತರಿಸಿದ ಪವಾಡವೂ ಚರಿತೆಯಲ್ಲಿ ದಾಖಲಾಗಿದೆ ಎಂದರು. ಅಂದೇ ಅವರನ್ನು ಮುಕ್ತಿಧರ ಎಂದು ಕರೆಯಲಾಗಿತ್ತು ಎಂಬುದನ್ನು ಸ್ಮರಿಸಿದ ಅವರು, ಜ. ೧೪ರಂದು ಶ್ರೀಲಂಕಾದಲ್ಲಿ ಜಗದ್ಗುರು ಪ್ರಾನ್ಸಿಸ್‌ರವರು ಅವರನ್ನು ಸಂತ ಗೌರವದಿಂದ ಸನ್ಮಾನಿಸಿರುವುದು ಕ್ರೈಸ್ತ ಸಮುದಾಯಕ್ಕೆ ಹಾಗೂ ಕರಾವಳಿಯ ಸಮಸ್ತ ಜನತೆಗೆ ಸಂತಸದ ಹಾಗೂ ಅಭಿಮಾನದ ದ್ಯೋತಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿನೋದ್ ಗಂಗೊಳ್ಳಿ ನಿರ್ದೇಶನದಲ್ಲಿ ಸಂತ ಜೋಸೆಫರು ಶ್ರೀಲಂಕಾದಲ್ಲಿ ಮಳೆ ತರಿಸಿದ ಪವಾಡದ ಬಗ್ಗೆ ಸಾಕ್ಷ್ಯ ರೂಪಕ ಪ್ರದರ್ಶನಗೊಂಡಿತು.