ಕಾಸರಗೋಡು ಜ.19 : ಸುಳ್ಯ- ಕಾಸರಗೋಡು ಮಾರ್ಗದ ಕೊಟ್ಯಾಡಿ ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದ ಯುವಕನೋರ್ವ ಮೃತಪಟ್ಟಿದ್ದಾರೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ಕೊರ ತ್ತೋಡಿ ನಾರಾಯಣ ಮಣಿಯಾಣಿ- ಲಕ್ಷ್ಮೀ ದಂಪತಿಯ ಪುತ್ರ ಸುನೀಲ್ ಕೊರತ್ತೋಡಿ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದ್ದು, ಅವರಿಗೆ 20 ವರ್ಷ ವಯಸ್ಸಾಗಿತ್ತು.
ಜನವರಿ ಕೊನೆಯ ವಾರ ಮನೆಯಲ್ಲಿ ನಡೆಯಲಿದ್ದ ದೈವದ ಕಾರ್ಯಕ್ರಮವೊಂದರ ಆಮಂತ್ರಣ ಪತ್ರಿಕೆಯನ್ನು ಮತ್ತು ದೈವದ ಕಾರ್ಯಕ್ರಮದ ನಿಮಿತ್ತ ಎಣ್ಣೆಯನ್ನು ಕಾಸರಗೋಡಿನ ಮುಳ್ಳೇರಿಯ ತರವಾಡು ಮನೆಗೆ ನೀಡಲು ಸುನೀಲ್ ತನ್ನ ಬೈಕ್‌ನಲ್ಲಿ ತಂದೆಯೊಂದಿಗೆ ಹೋಗುತ್ತಿದ್ದರು. ಕೊಟ್ಯಾಡಿಯಲ್ಲಿ ಕಾಸರಗೋಡು ಕಡೆಯಿಂದ ಹೋಗುತ್ತಿದ್ದ ಪಿಕಪ್ ಅವರ ಬೈಕಿಗೆ ಢಿಕ್ಕಿ ಹೊಡೆಯಿತು. ಪರಿಣಾಮ ಸುನೀಲ್ ಸ್ಥಳದಲ್ಲಿಯೇ ಮೃತಪಟ್ಟು ಅವರ ತಂದೆ ನಾರಾಯಣ ಗಂಭೀರ ಗಾಯಗೊಂಡರು. ಕಾಸರಗೋಡಿನಿಂದ ಮುಳ್ಳೇರಿಯಕ್ಕೆ ಕೋಳಿ ಸಾಗಾಟ ಮಾಡುತ್ತಿದ್ದ ಲಾರಿ ಮತ್ತು ಬೈಕ್ ನಡುವೆ ಈ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಇಬ್ಬರೂ ಬೈಕಿನಿಂದ ಎಸೆಯಲ್ಪಟ್ಟಿದ್ದು, ಸುನೀಲ್ ಘಟನಾ ಸ್ಥಳದಲ್ಲಿ ಮೃತಪಟ್ಟರು.
ನಾರಾಯಣರನ್ನು ಕಾಸರಗೋಡಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಯುವಕನ ಮರಣೋತ್ತರ ಪರೀಕ್ಷೆಯನ್ನು ಕಾಸರಗೋಡಿನ ಸರಕಾರಿ ಆಸ್ಪತ್ರೆಯಲ್ಲಿ ನಡೆಸಿ ಬಳಿಕ ಮೃತದೇಹವನ್ನು ವಾರಸುದಾರರಿಗೆ ನೀಡಲಾಯಿತು. ಸುನೀಲ್ ಸುಳ್ಯದ ಗ್ಯಾರೇಜೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು.
ಬೆಳಗ್ಗೆ 9:30ರ ಸುಮಾರಿಗೆ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಯಾಡಿ 24 ಮೈಲ್‌ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಆದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.