ಕನ್ನಡ ವಾರ್ತೆಗಳು

‘ಕೆಎಂಎಫ್’ ಘಟಕದಿಂದ ಶ್ರೀಘ್ರದಲ್ಲೇ ಮಿನರಲ್ ವಾಟರ್ ಬಾಟಲ್ ಮಾರುಕಟ್ಟೆಗೆ ಬಿಡುಗಡೆ

Pinterest LinkedIn Tumblr

kmf_minaral_watre

ಬೆಂಗಳೂರು,ಜ.19: ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ಇನ್ನು ಕೆಲವೇ ದಿನಗಳಲ್ಲಿ ಮಿನರಲ್ ವಾಟರ್ ಬಾಟಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.ಕೆಎಂಎಫ್ ಸಂಸ್ಥೆ ಮಿನರಲ್ ವಾಟರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಶೀಘ್ರದಲ್ಲಿಯೇ ಮಿನರಲ್ ವಾಟರ್ ಬಾಟಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಖಾಸಗಿ ಸಂಸ್ಥೆಗಳಿಗಿಂತ ಉತ್ತಮವಾದ ಮತ್ತು ಶುದ್ಧವಾದ ಕುಡಿಯುವ ನೀರನ್ನು ಕಡಿಮೆ ದರದಲ್ಲಿ ಬಿಡುಗಡೆ ಮಾಡುವುದಾಗಿ ಕೆಎಂಎಫ್ ತಿಳಿಸಿದೆ.

ಈ ಸಂಬಂಧ ಈಗಾಗಲೇ ಕೆಎಂಎಫ್ ಯೋಜನೆ ರೂಪಿಸಿದ್ದು, ಪ್ರಸ್ತುತ ರಾಜ್ಯದಲ್ಲಿ ಸುಮಾರು 1400 ಮತ್ತು ಬೆಂಗಳೂರಿನಲ್ಲಿ ಸುಮಾರು 400 ಹಾಲಿನ ಬೂತ್‌ಗಳನ್ನು ಹೊಂದಿರುವ ಕೆಎಂಎಫ್, ಈ ಎಲ್ಲ ಬೂತ್‌ಗಳಲ್ಲಿಯೂ ಹಾಲಿನ ಜೊತೆಗೆ ಮಿನರಲ್ ವಾಟರ್ ಬಾಟಲ್‌ಗಳನ್ನು ಕೂಡ ಪೂರೈಕೆ ಮಾಡಲಿದೆ. ಯೋಜನೆಯ ಆರಂಭಿಕ ಹಂತದಲ್ಲಿ ಖಾಸಗಿ ಸಂಸ್ಥೆ ಗಳೊಂದಿಗೆ ಒಪ್ಪಂದ ಮಾಡಿಕೊಂಡು ನೀರಿನ ಮಾರಾಟ ಮಾಡಲು ಚಿಂತಿಸಲಾಗುತ್ತಿದ್ದು, ಇದಕ್ಕೆ ಟೆಂಡರ್ ಕೂಡ ಕರೆಯಲಾಗಿತ್ತು. ಆದರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಎಎಸ್ ಪ್ರೇಮನಾಥ್ ತಿಳಿಸಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿ ಸುತ್ತಮುತ್ತ ನೀರಿನ ಘಟಕವನ್ನು ಆರಂಭಿಸಲು ಕೆಎಂಎಫ್ ನಿರ್ಧರಿಸಿದ್ದು, ಘಟಕಕ್ಕೆ 5 ಎಕರೆ ಜಮೀನಿನ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಘಟಕ ಸ್ಥಾಪನೆಗೆ 15 ಕೋಟಿ ರುಪಾಯಿ ವೆಚ್ಚವಾಗಲಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸಭೆ ಕರೆದು ಚರ್ಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ಹಾಲು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕೆಎಂಎಫ್ ಇದೀಗ ನೀರು ಮಾರಾಟದಲ್ಲಿಯೂ ತನ್ನನ್ನು ತೊಡಗಿಸಿಕೊಳ್ಳಲು ಮುಂದಾಗಿದೆ.

Write A Comment