ಮಂಗಳೂರು: ಇತ್ತೀಚೆಗೆ ಬೈಕಂಪಾಡಿ ಸಮೀಪದ ಮೀನಾಕಳಿಯ ಮನೆಯೊಂದರಲ್ಲಿ ನಡೆದ ವಿವಾಹಿತ ಮಹಿಳೆ ಕಲ್ಪನಾ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೂಲಿ ಕೆಲಸ ಮಾಡುತ್ತಿರುವ ವಿವಾಹಿತೆಯನ್ನು ಅತ್ಯಾಚಾರಕ್ಕೆ ಯತ್ನಿಸಿ ಆಕೆ ಸಹಕರಿಸದೇ ಇದ್ದಾಗ ಕತ್ತಿಯಿಂದ ಕಡಿದು ತಲೆಗೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಿವಾಹಿತೆಯ ಮೇಲೆ ಕಣ್ಣಿದ್ದು ಆಕೆಯನ್ನು ಬಯಸಿ ಅತ್ಯಾಚಾರಕ್ಕಾಗಿ ಯತ್ನಿಸಿ ಮನೆಗೆ ಅಕ್ರಮ ಪ್ರವೇಶ ಮಾಡಿದ್ದೆವು ಅಲ್ಲದೆ ಅತ್ಯಾಚಾರಕ್ಕೂ ಯತ್ನಿಸಿದ್ದೆವು ಆದರೆ ಆಕೆ ಸಹಕರಿಸದೇ ಇದ್ದು ಪ್ರತಿರೋಧ ಒಡ್ಡಿದಾಗ ವಿಷಯ ಬಹಿರಂಗಗೊಳ್ಳುತ್ತದೆ ಎನ್ನುವ ಭಯದಿಂದ ಹತ್ಯೆ ಮಾಡಿ ರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಎಂಸಿಎಫ್‍ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಧ್ಯ ಪ್ರದೇಶ ಮೂಲದ ರಾಜೇಶ್ ಎಂಬಾತನ ಪತ್ನಿ ಕಲ್ಪನಾ(25) ಎಂಬಾಕೆಯೇ ಕೊಲೆಯಾದ ವಿವಾಹಿತೆಯಾಗಿದ್ದಾಳೆ. ಈಕೆಯ ಪತಿ ರಾಜೇಶ್ ಎಂಬಾತ ರಾತ್ರಿ ಪಾಳಿಯ ಕೆಲಸಕ್ಕೆ ತೆರಳಿದ್ದು ಮನೆಯಲ್ಲಿ ಕಲ್ಪನಾ ಒಬ್ಬಳೇ ಇದ್ದಾಗ ಆಕೆಯನ್ನು ಅತ್ಯಾಚಾರಕ್ಕೆ ಯತ್ನಿಸಿ ವಿಫಲ ಗೊಂಡು ಎದೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈ ಕೃತ್ಯದ ಹಿಂದೆ ಒಬ್ಬನ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಒಂದು ತಂಡದ ಕೈವಾಡವೂ ಇರುವ ಶಂಕೆಯನ್ನು ಪೊಲೀಸರು ಆರಂಭದಿಂದಲೂ ವ್ಯಕ್ತ ಪಡಿಸಿದ್ದರು. ಆದರೆ ಅತ್ಯಾಚಾರ ನಡೆದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತುಗೊಳ್ಳದ ಕಾರಣ ಹತ್ಯೆಯ ಹಿನ್ನೆಲೆ ನಿಗೂಢವಾಗಿಯೇ ಉಳಿದಿತ್ತು.
ಇದಲ್ಲದೆ ಆಕೆ ವಾಸವಾಗಿದ್ದ ಬಾಡಿಗೆ ಮನೆಯ ಎಲ್ಲರ ವಿಚಾರಣೆ ನಡೆಸಿದ್ದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಈ ನಡುವೆ ಪೊಲೀಸರಿಗೆ ಸಣ್ಣ ಮಾಹಿತಿಯೊಂದು ಲಭ್ಯವಾಗಿದ್ದು ಇಬ್ಬರು ಕಾರ್ಮಿಕರು ರಾತ್ರಿ ಹಗಲು ಪಾಳಿಯ ಕೆಲಸ ಎಂದು ಹೊರಗೆ ಇರುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಈ ಬಗ್ಗೆ ಸ್ಪಷ್ಟತೆ ಪಡೆಯುವ ನಿಟ್ಟಿನಲ್ಲಿ ಪೊಲೀಸರು ಆ ಇಬ್ಬರು ಕಾರ್ಮಿಕರ ಕೋಣೆ ಪ್ರವೇಶಿಸಿದ್ದರು. ಅಲ್ಲಿ ತಪಾಸಣೆ ನಡೆಸಿದಾಗ ರಕ್ತ ಸಿಕ್ತವಾದ ಎರಡು ಅಂಗಿ ಪತ್ತೆಯಾಗಿತ್ತು. ಅದರಲ್ಲಿದ್ದ ರಕ್ತ ಮೃತ ಕಲ್ಪನಾ ರಕ್ತಕ್ಕೆ ಹೊಂದಿಕೆಯಾಗಿತ್ತು. ಅಷ್ಟರಲ್ಲಿ ಕೊಲೆ ಆರೋಪಿಗಳು ಇವರೇ ಎನ್ನುವುದು ಪೊಲೀಸರಿಗೆ ಸ್ಪಷ್ಟವಾಗಿತ್ತು. ಈ ನಿಟ್ಟಿನಲ್ಲಿ ಅವರ ಪತ್ತೆಗೆ ಬಲೆ ಬೀಸಿದ ಪೊಲೀಸರು ಕೊನೆಗೂ ಕೊಲೆ ಮಾಡಿ ಪರಾರಿಯಾಗಲು ಹಣ ಇಲ್ಲದೆ ನಗರದಲ್ಲೇ ತಲೆ ಮರೆಸಿಕೊಂಡಿದ್ದ ಇಬ್ಬರನ್ನೂ ಬಂಧಿಸಿದ್ದಾರೆ.