ಕನ್ನಡ ವಾರ್ತೆಗಳು

ಗುಂಡು ಹಾರಿಸಿ ತನ್ನ ಜೀವನವನ್ನು ಅಂತ್ಯಗೊಳಿಸಿದ ವಿಧ್ಯಾರ್ಥಿ.

Pinterest LinkedIn Tumblr

student_died_photo

ಬೆಂಗಳೂರು,ಜ.20 : ದ್ವಿತೀಯ ಪಿಯುಸಿ ವಿದ್ಯಾರ್ಥಿ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿದ್ಯಾರಣ್ಯಪುರ ದೊಡ್ಡಬೊಮ್ಮಸಂದ್ರದಲ್ಲಿ ಸೋಮವಾರ ನಡೆದಿದೆ. ಕುಶಾಲನಗರ ಮೂಲದ ಬಿಎಸ್‌ಎಫ್ ನಿವೃತ್ತ ಯೋಧ ಚಂದ್ರಶೇಖರ್ ಹಾಗೂ ಗೀತಾ ದಂಪತಿ ಪುತ್ರ ಜಿತೇಂದ್ರ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಮಲ್ಲೇಶ್ವರದಲ್ಲಿನ ಎಂಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ(ವಾಣಿಜ್ಯ) ವ್ಯಾಸಂಗ ಮಾಡುತ್ತಿದ್ದ.

ಮನೆಯಲ್ಲಿ ಒಬ್ಬನೇ ಇದ್ದಾಗ ಮಧ್ಯಾಹ್ನ 1.20ರ ವೇಳೆಗೆ ತಂದೆಯ ಕೊಠಡಿಯಲ್ಲಿದ ಪರವಾನಗಿ ಪಡೆದ ಡಬಲ್ ಬ್ಯಾರೆಲ್ ಗನ್ ಎತ್ತಿಕೊಂಡು ಮೊದಲು ಪರೀಕ್ಷಿಸಲೆಂದು 1 ಗುಂಡನ್ನು ಹಾಸಿಗೆಗೆ ಹೊಡೆದಿದ್ದು, 2ನೇ ಗುಂಡನ್ನು ತಲೆಗೆ ಹಾರಿಸಿಕೊಂಡಿದ್ದಾನೆ. ಗುಂಡಿನ ಶಬ್ದ ಕೇಳಿಸಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಆಗಮಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ವೇಳೆಗೆ ಆತನ ತಾಯಿಯೂ ಆಗಮಿಸಿದರು ಎನ್ನಲಾಗಿದೆ. ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕರೆ ಮಾಡಿ ಅತ್ತಿದ್ದ: ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಬಿಎಸ್‌ಎಫ್‌ನಿಂದ ಸ್ವಯಂ ನಿವೃತ್ತಿ ಪಡೆದಿದ್ದ ಚಂದ್ರಶೇಖರ್, ಖಾಸಗಿ ಕಂಪನಿಯಲ್ಲಿ ಭದ್ರತಾ ವಿಭಾಗದ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ಗೀತಾ, ಮಲ್ಲೇಶ್ವರದಲ್ಲಿರುವ ಖಾಸಗಿ ಗ್ಯಾಸ್ ಏಜೆನ್ಸಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಸೋಮವಾರ ಬೆಳಗ್ಗೆ ಸುಮಾರು 8.30ಕ್ಕೆ ದಂಪತಿ ಕೆಲಸಕ್ಕೆ ಹೋಗಿದ್ದರು. ಕಾಲೇಜಿನಲ್ಲಿ ಪ್ರಿಪರೇಟರಿ ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಜಿತೇಂದ್ರ 9.30ರ ವೇಳೆಗೆ ಕಾಲೇಜಿಗೆ ಹೋಗಿದ್ದ. ಆದರೆ, ಪರೀಕ್ಷೆಗೆ ಹಾಜರಾಗದೆ ಮನೆಗೆ ಮರಳಿದ್ದ. ಮಧ್ಯಾಹ್ನ 12.40ರಲ್ಲಿ ತಾಯಿಗೆ ಕರೆ ಮಾಡಿ, ಎಷ್ಟೊತ್ತಿಗೆ ಮನೆಗೆ ಬರುವೆ ಎಂದು ವಿಚಾರಿಸಿ, ಕಣ್ಣೀರು ಹಾಕಿದ್ದ. ಗಾಬರಿಗೊಂಡ ತಾಯಿ ಮತ್ತೆ ಕರೆ ಮಾಡಿದರೂ, ಕರೆ ಸ್ವೀಕರಿಸಿರಲಿಲ್ಲ ಎಂದು ಗೀತಾ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

ನಿನ್ನ ಹೊಟ್ಟೆಯಲ್ಲೇ ಹುಟ್ಟುವೆ: ಅಮ್ಮ, ಅಪ್ಪ ದಯವಿಟ್ಟು ಕ್ಷಮಿಸಿ. ಕೆಲವು ವಿಚಾರಗಳಿಂದ ಮನನೊಂದು ನಿಮ್ಮನ್ನು ಬಿಟ್ಟು ಬಹುದೂರ ಹೋಗುತ್ತಿದ್ದೇನೆ. ಮುಂದಿನ ಜನ್ಮದಲ್ಲಿ ಮತ್ತೆ ನಿಮ್ಮ ಹೊಟ್ಟೆಯಲ್ಲಿಯೇ ಮಗನಾಗಿ ಹುಟ್ಟಿಬರುತ್ತೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಜಿತೇಂದ್ರ ತಾಯಿಗೆ ಪತ್ರ ಬರೆದಿಟ್ಟಿದ್ದಾನೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ವ್ಯಾಸಂಗದಲ್ಲಿ ತೀರಾ ಹಿಂದೆ ಉಳಿದಿದ್ದ. ಪರೀಕ್ಷೆ ಸರಿಯಾಗಿ ಬರೆಯದ ಕಾರಣಕ್ಕೆ ಆತ್ಮಹತ್ಯೆಯಂಥ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ತಂದೆಯ ಪರವಾನಗಿ ಪಡೆದ ಗನ್‌ನಿಂದ ತಲೆಗೆ ಗುಂಡು ಹೊಡೆದುಕೊಂಡು ಜಿತೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಆತ ಕಾಲೇಜಿಗೆ ಸರಿಯಾಗಿ ಹೋಗದೆ, ವ್ಯಾಸಂಗದಲ್ಲಿ ಹಿಂದಿದ್ದ. ಹಾಗಾಗಿ ಈ ರೀತಿ ಮಾಡಿಕೊಂಡಿದ್ದಾನೆ ಎಂಬ ಮಾತು ಕೇಳಿಬಂದಿದ್ದು, ಈ ಬಗ್ಗೆ ವಿಚಾರಣೆ ನಡೆಸಲಾಗುವುದು. ಈಗ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

Write A Comment