ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಪುತ್ರಿ ಎಂದು ಬಿಂಬಿಸಿ ಮೈತುಂಬಾ ಚಿನ್ನ ಧರಿಸಿದ ಯಾವುದೋ ಅನಾಮಧೇಯ ಮದುವೆಯ ಮದುಮಗಳ ಫೋಟೋ ದೃಶ್ಯಗಳನ್ನು ವಾಟ್ಸ್‌ಅಪ್ ಮತ್ತು ಇತರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವಂತೆ ಮಾಡಿದ ಬಗ್ಗೆ ಬೆಂಗಳೂರಿನ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಫೋಟೋದಲ್ಲಿರುವ ಹೆಣ್ಣು ಮಗಳು ಸಚಿವರ ಪುತ್ರಿಯಾಗಲಿ, ಸಂಬಂಧಿಕರಾಗಲಿ ಆಗಿರುವುದಿಲ್ಲ. ಸಚಿವರ ಏಕೈಕ ಪುತ್ರಿ ನಸೀಮ ಹವ್ವ (12) ಕೇರಳದ ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಅತ್ಯಂತ ಸರಳ ಹಾಸ್ಟೆಲ್ ಒಂದರಲ್ಲಿ ನೆಲೆಸಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಕೆ.ಎ.ಹಿದಾಯತುಲ್ಲಾ ಅವರು ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಫೋಟೊದಲ್ಲಿ ಚಿತ್ರಿಸಿರುವ ಮದುಮಗಳು ಮೈತುಂಬಾ ಚಿನ್ನವನ್ನು ಧರಿಸಿರುವಂತೆ ತೋರಿಸುವ ಮೂಲಕ ಸಚಿವರು ತನ್ನ ಪುತ್ರಿಯ ಮದುವೆಯನ್ನು ಅದ್ದೂರಿಯಾಗಿ ನಡೆಸಿದರು ಎಂದು ಬಿಂಬಿಸುವ ಷಡ್ಯಂತ್ರವಾಗಿದೆ. ಇದರಿಂದ ಸಚಿವರಿಗೆ, ಅವರ ಕುಟುಂಬದವರಿಗೆ, ಆಪ್ತ ಶಾಖೆಯ ಸಿಬಂದಿಗೆ ಮುಜುಗರ ಉಂಟಾಗಿದೆ. ಈ ಸುಳ್ಳು ಸುದ್ದಿಯ ಮೂಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ಕಾನೂನು ರೀತ್ಯಾ ಕ್ರಮ ಜರಗಿಸ ಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.