ಮಂಗಳೂರು, ಜ.23 : ದ.ಕ.ಜಿಲ್ಲಾಡಳಿತ, ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ 26ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ವನ್ನು ಕಾರ್ಪೊರೇಶನ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಬನ್ಸಾಲ್ ಉದ್ಘಾಟಿಸಿದರು. ಗುರುವಾರ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಸ್ತೆ ಸುರಕ್ಷತೆ ಕಾಪಾಡುವುದು ಪ್ರತಿಯೊಬ್ಬರ ಹೊಣೆ. ಸಂಚಾರ ನಿಯಮಗಳನ್ನು ಗೌರವಿಸಿ ಎಲ್ಲರ ಜೀವ ಉಳಿಸುವ ಕಾರ್ಯ ಎಲ್ಲರ ಜವಾಬ್ದಾರಿ ಎಂದು ಹೇಳಿದರು. ಶಾಸಕ ಜೆ.ಆರ್.ಲೋಬೊ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್ ಆಯುಕ್ತ ಎಸ್.ಮುರುಗನ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪಠ್ಯಪುಸ್ತಕಗಳಲ್ಲಿ ಸಂಚಾರಿ ನಿಯಮ ಅಳವಡಿಸಲು ಪ್ರಸ್ತಾವನೆಗೆ ಕ್ರಮ:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಮಾತನಾಡಿ, ಪಠ್ಯ ಪುಸ್ತಕಗಳಲ್ಲಿ ಸಂಚಾರಿ ನಿಯಮಗಳ ವಿಷಯ ಅಳವಡಿಸುವ ಅಗತ್ಯವಿದೆ. ಈ ಬಗ್ಗೆ ಪ್ರಸ್ತಾವನೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ವಾಹನ ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಎಸ್ಪಿ ಡಾ.ಎಸ್.ಡಿ.ಶರಣಪ್ಪ ಮಾತನಾಡಿದರು.
ನಗರದಲ್ಲಿ ಸಂಚಾರ ದಟ್ಟಣೆ ಉಂಟಾದಾಗ ಸುಗಮ ಸಂಚಾರಕ್ಕೆ ಶ್ರಮಿಸುವ ಅಬ್ದುರ್ರವೂಫ್, ನೆಲ್ಸನ್ ಪಿರೇರ, ಹಸನಬ್ಬ, ಅಪಘಾತಗಳು ಸಂಭವಿಸಿದಾಗ ಗಾಯಾಳುಗಳನ್ನು ತನ್ನ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವ ಚಾಲಕಿ ಪುತ್ತೂರಿನ ಸಹರಾ ಬಾನು, ಅಪಘಾತ ರಹಿತ ಚಾಲಕ ನೀಲು ಮುರುಗನ್‌ರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಅಫ್ಝಲ್ ಅಹ್ಮದ್ ಖಾನ್ ಸ್ವಾಗತಿಸಿದರು. ಎಸಿಪಿ (ಸಂಚಾರಿ) ಉದಯ ನಾಯ್ಕಾ ವಂದಿಸಿ ದರು. ಸಹಾಯಕ ಆರ್‌ಟಿಒ ಜಿ.ಎಸ್.ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ರಿಸರ್ವ್ ಪೊಲೀಸ್ ಕಮಾಂ ಡೆಂಟ್ ರಂಗಸ್ವಾಮಿ ಉಪಸ್ಥಿತರಿದ್ದರು.