ಮಂಗಳೂರು,ಜ.23: ಕದ್ರಿ ಶ್ರೀ ಮಂಜುನಾಥ ದೇವರ ವರ್ಷಾವಧಿ ಜಾತ್ರೆಯ ಪ್ರಯುಕ್ತ ಗುರುವಾರ ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವರು ರಥಾರೋಹಣವಾಗಿ, ಸಂಜೆ 6 ಗಂಟೆಗೆ ಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.
23ರಂದು ಕವಾಟೋದ್ಘಾಟನೆ, ಅವಭೃತ ಸ್ನಾನ ನಡೆಯಲಿದೆ. 25ರಂದು ಮಲರಾಯ ದೈವದ ನೇಮ ಜರಗಲಿದೆ. ಪ್ರತಿದಿನ ರಾತ್ರಿ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮಲ್ಲಿಕಾ ಕಲಾ ವೃಂದ ಹಾಗೂ ದೇವಾಲಯದ ಸಹಯೋಗದೊಂದಿಗೆ ರಾಜಾಂಗಣದಲ್ಲಿ ನಡೆಯಲಿದೆ.
ಜ.17ರಂದು ಬಿಕರ್ನಕಟ್ಟೆ ಸವಾರಿ ಬಲಿ, 18ರಂದು ಮಲ್ಲಿಕಟ್ಟೆ ಸವಾರಿ ಬಲಿ, 19ರಂದು ಮುಂಡಾಣಕಟ್ಟೆ ಸವಾರಿ ಬಲಿ, 20ರಂದು ಕೊಂಚಾಡಿ ಸವಾರಿ ಬಲಿ, ಜ.21ರಂದು ಏಳನೆ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಪರಿಣಾಮವಾಗಿ ಜಾತ್ರಾ ಮಹೋತ್ಸವಕ್ಕೆ ವಿಶೇಷ ಆಕರ್ಷಣೆ ದೊರೆಯಿತು. ವಿಶೇಷ ವಿದ್ಯುದೀಪಗಳ ಅಲಂಕಾರದೊಂದಿಗೆ ಕ್ಷೇತ್ರಕ್ಕೆ ಹೊಸ ಮೆರುಗು ದೊರೆತಿದೆ. ಭಾರೀ ಸಂಖ್ಯೆಯಲ್ಲಿ ಭಾಕ್ತಾದಿಗಳು ಮಧ್ಯಾಹ್ನ ಹಾಗೂ ರಾತ್ರಿ ಕ್ಷೇತ್ರಕ್ಕೆ ಆಗಮಿಸಿ, ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸುತ್ತಿದ್ದಾರೆ. ಜ.15ರಂದು ಕದ್ರಿ ಕಂಬಳದಿಂದ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ ಸಾಗಿ ಬಂದಿತ್ತು.
ಕ್ಷೇತ್ರದಲ್ಲಿ ಭಕ್ತರು ಹಾಗೂ ಯಾತ್ರಿಕರಿಗೆ ಪ್ರತಿನಿತ್ಯ ಅನ್ನ ಸಂತರ್ಪಣೆ ನಡೆಯುತ್ತಿದೆ. ಪ್ರತೀ ತಿಂಗಳು ಇಲ್ಲಿ ಸುಮಾರು 2 ಲಕ್ಷ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸುತ್ತಿದ್ದು, ಸುಮಾರು 8 ಲಕ್ಷ ರೂ.ಗಳಷ್ಟು ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಕ್ಷೇತ್ರದ ಅನ್ನಸಂತರ್ಪಣೆ ಸೇವೆಗೆ ಆರ್ಥಿಕ ಸಹಾಯ ನೀಡುವವರು ಕ್ಷೇತ್ರದ ಕಚೇರಿಯನ್ನು ಸಂಪರ್ಕಿಸಬಹುದು’ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯ ಎಸ್. ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.